ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಂಬೇಡ್ಕರ್ ಭವನ ವಿಸ್ತರಣೆಗೆ ನಿವೇಶನ

Rashmi Kasaragodu
Updated On : 8 Jul 2014, 1:50 am

ಅರಸೀಕೆರೆ: ಪಟ್ಟಣದ ಜೇನುಕಲ್ ಕ್ರೀಡಾಂಗಣ ಸಮೀಪ ಸುಮಾರು 1.5 ಕೋಟಿ  ರು. ವೆಚ್ಚದಲ್ಲಿ ನಿರ್ಮಿಸುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಪೂರಕವಾಗಿ ಹೊಂದಿಕೊಂಡಿರುವ ಮೂರು ನಿವೇಶನಗಳನ್ನು ಆದರ ಮಾಲೀಕರಿಂದ ಖರೀದಿಸಿ ಭವನದ ವಿಸ್ತರಣೆಗೆ ಶಾಸಕರು ಹೆಚ್ಚಿನ ಸಹಕಾರ ನೀಡಬೇಕೆಂಬ ದಲಿತ ಸಮಾಜದ ಮುಖಂಡರ ಮನವಿಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ತಮ್ಮ ಸಹಮತ ವ್ಯಕ್ತಪಡಿಸಿ ನಿವೇಶನಗಳನ್ನು ಕೊಡಿಸುವ ಭರವಸೆ ನೀಡಿದರು.
 ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಇತ್ತೀಚೆಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಹಿತಾರಕ್ಷಣಾ ಸಮಿತಿ ಸಭೆ ನಡೆಯಿತು.
ಸ್ಮಶಾನಕ್ಕೆ ದಾರಿ ಕಲ್ಪಿಸಿ: ತಾಲೂಕು ದಲಿತ ಸಂಘಟನೆ ಮುಖಂಡ ರಂಗನಾಥ್ ಮಾತನಾಡಿ, ಅನೇಕ ವರ್ಷಗಳಿಂದ ಪಟ್ಟಣದ ಶ್ರೀನಿವಾಸ ನಗರದಲ್ಲಿನ ಎಸ್.ಸಿ ಮತ್ತು ಎಸ್.ಟಿ ಜನಾಂಗದ ಸ್ಮಶಾನಕ್ಕೆ ಹೋಗಲು ವ್ಯವಸ್ಥಿತ ರಸ್ತೆಯ ಸಂಪರ್ಕ ಇಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಉಪ ವಿಭಾಗಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
 ತಕ್ಷಣ ಶಾಸಕರು ನಿವೇಶನಗಳನ್ನು ಮಾಲೀಕರಿಂದ ಖರೀದಿಸಲು ಸರ್ಕಾರದ ನೀತಿ ನಿಯಮದಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಅಂತೆಯೇ ಪಟ್ಟಣದಲ್ಲಿ ಸ್ಮಶಾನಕ್ಕೆ ಹಾಗೂ ತಾಲೂಕಿನ ಕಲ್ಲಸಾದರಹಳ್ಳಿ ಎಸ್.ಟಿ. ವಿದ್ಯಾರ್ಥಿಗಳ ಹಾಸ್ಟಲ್ಗೆ ರಸ್ತೆ ನಿರ್ಮಾಣ ಮಾಡಲು ಜಿಲ್ಲಾ ಉಪ ವಿಭಾಗಧಿಕಾರಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲು ಅಧಿಕಾರಿಗಳಿಗೆ ಸಲಹೆ ಮಾಡಿದರು.  
ನಿವೇಶನ ಹಂಚಿಕೆಗೆ ಕ್ರಮ: ತಾಲೂಕಿನ ಡಿ.ಎಂ.ಕುರ್ಕೆ ಗ್ರಾಮದ ವಾಸಿ ಮೂಡ್ಲಪ್ಪ ಮಾತನಾಡಿ 2006ರಿಂದ ಗ್ರಾಮದಲ್ಲಿ ನಿವೇಶನ ಕೊಡುವುದಾಗಿ ಹೇಳಲಾಗುತ್ತಿದೆ. ಆದರೆ ಒಂದು ನಿವೇಶನವನ್ನೂ ನೀಡಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಗ್ರಾಮದಲ್ಲಿ ಕೇವಲ 40 ರಿಂದ 45 ನಿವೇಶನಗಳಿದ್ದು, ಫಲಾನುಭವಿಸಗಳು 200ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ನಿವೇಶನಗಳನ್ನು ವಿತರಣೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಗ್ರಾಮಸ್ಥರನ್ನು ಸಭೆ ಸೇರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವ ಭರವಸೆಯನ್ನು ನೀಡಿದರು.
 ತಾಲೂಕಿನ ಡಿ.ಎಂ.ಕುರ್ಕೆ ಗ್ರಾಮದಿಂದ ಶಶಿವಾಳ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಡಾಬ ನಡೆಸುತ್ತಿರುವ ಮಾಲೀಕರು ಇಲ್ಲಿ ಆಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಕಾನೂನು ಕ್ರಮ ಜರುಗಿಸಲು ತೀರ್ಮಾನಿಸಲಾಯಿತು.
 ಸಭೆಯಲ್ಲಿ ತಾ.ಪಂ. ಅಧ್ಯಕ್ಷೆ ಚಿಕ್ಕಮ್ಮ, ಮಾಜಿ ಅಧ್ಯಕ್ಷ ಎಚ್.ಟಿ. ಶಿವಮೂರ್ತಿ, ಕಾರ್ಯನಿರ್ವಹಣಾಧಿಕಾರಿ ಟಿ.ಎನ್.ಮೂರ್ತಿ, ತಹಸೀಲಾರ್ ನಟರಾಜ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಕಾಶ್ಮೂರ್ತಿ, ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಗಂಗಾಧರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ನಟರಾಜು, ದಲಿತ ಪರ ಸಂಘಟನೆಗಳ ಮುಖಂಡರುಗಳಾದ ಬಾಣಾವರ ವೆಂಕಟೇಶ್, ಎ.ಪಿ.ಚಂದ್ರಯ್ಯ, ಹುಲಿಯಪ್ಪ, ಚಂದ್ರಶೇಖರ್ ಸೇರಿದಂತೆ ಮುಂಖಡರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement