ಅರಸೀಕೆರೆ ತಾಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಅರಸೀಕೆರೆ: ತಾಲೂಕಿನ ಪಂಚಾಯ್ತಿಯ ಎರಡನೇ ಅವಧಿಗೆ ಜೆಡಿಎಸ್ ಸದಸ್ಯ ಲಕ್ಷ್ಮಣ್ ಅಧ್ಯಕ್ಷ ಮತ್ತು ಚಿಕ್ಕಮ್ಮ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಉಪವಿಭಾಗಾಧಿಕಾರಿ ಬಿ. ಶರತ್ ಸೋಮವಾರ ಘೋಷಿಸಿದರು.
ತಾಲೂಕು ಪಂಚಾಯ್ತಿಯ ಒಟ್ಟು 26 ಸದಸ್ಯ ಸ್ಥಾನಗಳ ಪೈಕಿ ಜೆಡಿಎಸ್ನ 18 ಸದಸ್ಯರು ಬಿಜೆಪಿಯ 4 ಸದಸ್ಯರು ಕಾಂಗ್ರೆಸ್ನ 3 ಸದಸ್ಯರು ಹಾಗೂ 1 ಪಕ್ಷೇತರ ಸ್ಥಾನದ ಸದಸ್ಯರಿದ್ದು, ಅತ್ಯಂತ ಹೆಚ್ಚಿನ ಬಹುಮತದ ಸದಸ್ಯರ ಬೆಂಬಲ ಹೊಂದಿರುವ ಜೆಡಿಎಸ್ ಪಾಳೇಯದಲ್ಲಿ ಅನೇಕರು ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದರು. ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗದ ಎ ಗುಂಪಿಗೆ ಮತ್ತು ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದು, ಸೋಮವಾರ ಸಂಜೆ ಜಿಲ್ಲಾ ಉಪವಿಭಾಗಾಧಿಕಾರಿಗಳಾದ ಬಿ. ಶರತ್ರವರು ಚುನಾವಣಾಧಿಕಾರಿಯಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆಸಿದ ಚುನಾವಣೆಯಲ್ಲಿ ಜೆಡಿಎಸ್ನ ಮನಕತ್ತೂರು ಕ್ಷೇತ್ರದ ಸದಸ್ಯ ಲಕ್ಷ್ಮಣ್ ಹಾಗೂ ಕರಗುಂದ ಕ್ಷೇತ್ರದ ಪರಿಶಿಷ್ಟ ಜಾತಿಯ ಮಹಿಳಾ ಸದಸ್ಯೆ ಚಿಕ್ಕಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರು.
ಇತರೆ ಯಾವ ಸದಸ್ಯರು ಚುನಾವಣೆಗೆ ನಾಮಪತ್ರವನ್ನು ಸಲ್ಲಿಸದ ಕಾರಣ ಚುನಾವಣಾಧಿಕಾರಿಗಳು ಅವಿರೋಧ ಆಯ್ಕೆಯನ್ನು ಘೋಷಿಸಿದರು. ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ, ಸದಸ್ಯ ಹುಚ್ಚೇಗೌಡ, ತಾಪಂ ಮಾಜಿ ಅಧ್ಯಕ್ಷ ಎಚ್.ಟಿ. ಶಿವಮೂರ್ತಿ, ಪುರಸಭಾ ಅಧ್ಯಕ್ಷ ಮೋಹನ್ಕುಮಾರ್ ಹಾಗೂ ಜೆಡಿಎಸ್ನ ಚುನಾಯಿತ ಸದಸ್ಯರು ಮತ್ತು ಮುಖಂಡರು ಅಲ್ಲದೆ ತಾಲೂಕಿನ ವಿವಿಧ ಸಮಾಜದ ಗಣ್ಯರು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಪುಷ್ಪಾಹಾರ ಹಾಕುವ ಮೂಲಕ ಅಭಿನಂದಿಸಿದರು.