ಕುಡಿವ ನೀರಿಗೆ ಹಾಹಾಕಾರ
ಚನ್ನರಾಯಪಟ್ಟಣ: ಕುಡಿಯುವ ನೀರಿನ ಹಾಹಾಕಾರವನ್ನು ಸಹಿಸದ ತಾಲೂಕಿನ ಜುಟ್ಟನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸರಹಳ್ಳಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಪ್ರತಿಭಟಿಸಿದ ಘಟನೆ ಸೋಮವಾರ ನಡೆಯಿತು.
ಜುಟ್ಟನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ದಾಸರಹಳ್ಳಿ ಗ್ರಾಮದ ಜನತೆ ಕಳೆದ 6ತಿಂಗಳಿಂದ ಕುಡಿಯುವ ನೀರಿನ ಬವಣೆ ನೀಗಿಸುವಂತೆ ಗ್ರಾಮ ಪಂಚಾಯಿತಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನ ಕಾಣದ ಜನತೆ ಸೋಮವಾರ ಜುಟ್ಟನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಬಳಿ ಜಮಾಯಿಸಿ ಗ್ರಾಮ ಪಂಚಾಯಿತಿ ಸದಸ್ಯ ಸೇರಿದಂತೆ ನೌಕರರನ್ನು ಕಚೇರಿಯೊಳಗೆ ಕೂಡಿ ಹಾಕಿ ಬಾಗಿಲಿಗೆ ಬೀಗ ಜಡಿದು ಪ್ರತಿಭಟಿಸಿದರು.
ಸುದ್ದಿ ತಿಳಿದ ತಕ್ಷಣ ಗ್ರಾಮ ಪಂಚಾಯಿತಿ ಪಿಡಿಒ ಮಂಜೇಗೌಡ ಗ್ರಾಮ ಪಂಚಾಯಿತಿ ಕಚೇರಿ ಬಳಿ ಆಗಮಿಸಿ ಜನತೆ ಜತೆ ಚರ್ಚಿಸಲು ಮುಂದಾದರೂ ಅದಕ್ಕೆ ಒಪ್ಪದ ಜನತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸ್ಥಳಕ್ಕಾಗಮಿಸುವವರೆಗೆ ಬೀಗ ತೆಗೆಯಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.
ಬೆಳಗ್ಗೆ 10ಕ್ಕೆ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದ ಜನತೆ ಮಧ್ಯಾಹ್ನ 4ರವರಗೆ ಕಚೇರಿಯೊಳಗೆ ಕೂಡಿ ಹಾಕಿದ್ದು, ಶಾಶ್ವತವಾಗಿ ಪರಿಹಾರ ನೀಡುವ ಭರವಸೆಯನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನೀಡುವವರೆಗೆ ತಾವು ಬೀಗ ತೆಗೆಯುವುದಿಲ್ಲವೆಂದು ಖಾಲಿ ಕೊಡಗಳನ್ನು ಪ್ರದರ್ಶಿಸಿ ಕುಳಿತರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮೃತ್ಯುಂಜಯ ಗ್ರಾಮ ಪಂಚಾಯಿತಿ ಕಚೇರಿಗೆ ಬಳಿಗೆ ಆಗಮಸಿ ಶಾಶ್ವತ ಕುಡಿಯುವ ನೀರು ನೀಡಲು ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ ನಂತರ ಕಚೇರಿಯ ಬೀಗ ತೆಗೆದು ಕರ್ತವ್ಯಕ್ಕೆ ಅನುವು ಮಾಡಿದರು.