ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪಿಡಿಒ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ

Rashmi Kasaragodu
Updated On : 8 Jul 2014, 1:48 am

ಕನ್ನಡಪ್ರಭ ವಾರ್ತೆ,  ಬೇಲೂರು, ಜು. 7
ಜನಪ್ರತಿನಿಧಿ ಹಾಗೂ ಶ್ರೀಸಾಮಾನ್ಯರ ಕೆಲಸ ಕಾರ್ಯಗಳನ್ನು ಮಾಡಿಕೊಡುವ ಬಗ್ಗೆ ಚೀಕನಹಳ್ಳಿ ಗ್ರಾಮ ಪಂಚಾಯಿ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ್ಯ ತೋರುತ್ತಿದ್ದಾರೆಂದು ಆರೋಪಿಸಿ, ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರು  ಗ್ರಾಮ ಪಂಚಾಯ್ತಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ತಾಲೂಕಿನ ಚೀಕನಹಳ್ಳಿ ಗ್ರಾಪಂ ಮುಂಭಾಗ ಪ್ರತಿಭಟನೆ ನಡೆಸಿದ ಗ್ರಾಪಂ ಆಧ್ಯಕ್ಷ ಮಲ್ಲಿಕಾರ್ಜುನ್ ಹಾಗೂ ಸದಸ್ಯರು 4 ತಿಂಗಳ ಹಿಂದೆ ವರ್ಗವಾಗಿ ಬಂದ ಪಿಡಿಒ ಅಶೋಕ್ ಕುಮಾರ್, ಸದಸ್ಯರ ನಡುವೆ ತಾರತಮ್ಯ ತೋರುತ್ತಿದ್ದಾರೆ. ಹೆಚ್ಚು ರಾಜಕೀಯ ಪ್ರಭಾವ ಬೀರುವ ಇಬ್ಬರು ಸದಸ್ಯರ ಮಾತಿಗೆ ಮನ್ನಣೆ ಕೊಡುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಜನರ ಕೆಲಸ ಮಾಡಿಕೊಡುವಲ್ಲಿ ಪಿಡಿಒ ನಿರ್ಲಕ್ಷ್ಯ ತೋರುತ್ತಿದ್ದಾರೆ.  ಸರ್ಕಾರದ ಸವಲತ್ತುಗಳ ಮಾಹಿತಿಯನ್ನು ನೀಡುವಲ್ಲಿ ವಿಫಲರಾಗಿದ್ದರೆ. ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು ಎಷ್ಟು ಜನತಾ ಮನೆಗಳು ಮಂಜೂರಾಗಿವೆ, ಎಷ್ಟು ವಿತರಣೆ ಮಾಡಲಾಗಿದೆ? ದನ ಕಟ್ಟುವ ಕೊಟ್ಟಿಗೆ ಎಷ್ಟು ಬಂದಿದೆ? 150 ಶೌಚಾಲಯದಲ್ಲಿ ಎಷ್ಟು ವಿತರಿಸಲಾಗಿದೆ? ಸರ್ಕಾರದಿಂದ ನೀಡುವ ಉಚಿತ ಸಸಿಗಳನ್ನು ಪರಿಶಿಷ್ಟ ವರ್ಗದವರಿಗೆ ಶೇ.60 ಹಾಗೂ ಸಾಮಾನ್ಯ ವರ್ಗಕ್ಕೆ ಶೇ. 40ರಷ್ಟು ನೀಡಬೇಕು ಎಂಬ ನಿಯಮನ್ನು ಗಾಳಿಗೆ ತೂರಿದ್ದಾರೆ. ತಮಗೆ ಬೇಕಾದವರಿಗೆ ಸವಲತ್ತು ಕೊಡುತ್ತಿದ್ದಾರೆ ಎಂದು ದೂರಿದರು.
ಸದಸ್ಯರಾದ ಮಂಜುನಾಥ್ ಮಾತನಾಡಿ, ಕಳೆದ ನಾಲ್ಕು ತಿಂಗಳಿಂದ ಗ್ರಾಪಂ ಆಧಿಕಾರ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಜನತೆಯ ಸಮಸ್ಯೆಯನ್ನು ನಮ್ಮ ಕೈಯಲ್ಲಿ ಬಗೆಹರಿಸಲು ಆಗುತ್ತಿಲ್ಲ, ಸಿರಗುರ ಗ್ರಾಮದಲ್ಲಿ 3 ತಿಂಗಳ ಹಿಂದೆ ಕುಡಿಯುವ ನೀರನ್ನು ಎತ್ತುವ ಮೋಟಾರು ಕೆಟ್ಟು ಹೋಗಿದ್ದು, ಸಾಕಷ್ಟು ಬಾರಿ ಮನವಿ ಮಾಡಿದ್ದರೂ, ಪಿಡಿಒ ಯಾವುದೇ ಕ್ರಮ ಕೈಗೊಳ್ಳದೆ ತಮಗಿನ್ನೂ ಆಧಿಕಾರ ಹಸ್ತಾಂತರವಾಗಿಲ್ಲ ಎಂಬ ಉಡಾಫೆ ಉತ್ತರ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಪಂ  ಸದಸ್ಯರಾದ ಚಂದ್ರಕಲಾ, ಗಿರಿಜಮ್ಮ, ಚಂದ್ರಕಲಾ, ಲಲಿತಮ್ಮ, ಸಿರಗುರ, ಕುಂಬಾರ ಹಳ್ಳಿ ಗ್ರಾಮಸ್ಥರು ಪ್ರತಿಭಟನೆಯಲ್ಲಿದ್ದರು.
ಆರೋಪದಲ್ಲಿ ಹುರುಳಿಲ್ಲ: ಅಧ್ಯಕ್ಷ ಹಾಗೂ ಸದಸ್ಯರ ಆರೋಪಕ್ಕೆ  ಪಿಡಿಓ ಅಶೋಕ್ ಕುಮಾರ್ ಪ್ರತಿಕ್ರಿಯಿಸಿ, ತಾವು ಅಧಿಕಾರ ವಹಿಸಿಕೊಂಡು 4 ತಿಂಗಳಾಗಿದ್ದು, ಎಲ್ಲರೊಂದಿಗೂ ಹೊಂದಿಕೊಳ್ಳುತ್ತಿದ್ದೇನೆ. ಎಲ್ಲ ಸದಸ್ಯರನ್ನೂ ಗೌರವದಿಂದ ಕಾಣುತ್ತಿದ್ದೇನೆ. ಆದರೆ ಇವರು ಮಾಡುತ್ತಿರುವ ಆರೋಪದಲ್ಲಿ  ಯಾವುದೇ  ಹುರುಳಿಲ್ಲ ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement