ಪೌಷ್ಟಿಕ ಕಿರು ಧಾನ್ಯ ಉಳಿಸಿ, ಬೆಳೆಸಿ
ಹಾಸನ: ತಾಲೂಕಿನ ಸಾಲಗಾಮೆ ಹೋಬಳಿ ಸಾಣೇನಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ, ಅನುಗನಾಳು ಗ್ರಾಮದ ಜೀವವೈವಿಧ್ಯ ಸಂರಕ್ಷಣೆ ಮತ್ತು ಸಂಶೋಧನಾ ಟ್ರಸ್ಟಿ ಹಾಗೂ ಸಾವಯವ ಸಾಣೇನಹಳ್ಳಿಯ ಕೃಷಿಕರ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ಸಾವಯವ ಕೃಷಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪ್ರಗತಿಪರ ಹಾಗೂ ಸಾವಯವ ಕೃಷಿಕ ಸಂತೆಶಿವರ ಬಸವರಾಜು ಮಾತನಾಡಿ, ಪೂರ್ವಿಕರ ಕಾಲದಿಂದಲೂ ಬೆಳೆಸಿಕೊಂಡು ಬಂದಿರುವ ಸಜ್ಜೆ, ನವಣೆ ಮತ್ತು ಸಾವೆ ಇನ್ನೂ ಮುಂತಾದ ಕಿರುದಾನ್ಯಗಳಾದ ಉಳಿಸಿ-ಬೆಳೆಸಬೇಕಾಗಿದೆ. ಇವುಗಳಲ್ಲಿ ಒಳ್ಳೆಯ ಪೌಷ್ಟಿಕಾಂಶಗಳು ಇವೆ ಹಾಗೂ ಇವುಗಳಲ್ಲಿ ರೋಗ ನಿರೋಧಕ ಶಕ್ತಿ ಇದೆ ಎಂದು ತಿಳಿಸಿದರು.
ಎರೆ ಹುಳು ಸಂರಕ್ಷಿಸಿ: ರೈತನ ಮಿತ್ರ ಎಂಬ ಬಿರುದನ್ನು ಪಡೆದಿರುವ ಎರೆಹುಳುಗಳು ಭೂಮಿಯಲ್ಲಿ ಕಾಣಸಿಗುತ್ತಿಲ್ಲ. ಇವುಗಳಿಲ್ಲದೆ ಭೂಮಿಗೆ ಫಲವತ್ತತೆ ಇಲ್ಲ. ಇವುಗಳ ಜತೆಗೆ ಸಾವಯವ ಗೊಬ್ಬರವನ್ನು ಬಳಸಿ ಬೆಳೆಗಳನ್ನು ಬೆಳೆಯಬೇಕೆಂದು ಸಲಹೆ ನೀಡಿದರು. ಕೃಷಿ ಅಧಿಕಾರಿ ಕಿರಣ್ಕುಮಾರ್, ಸಹಾಯಕ ಕೃಷಿ ಅಧಿಕಾರಿ ಅಜಿತ್ಪ್ರಸಾದ್, ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಎಸ್.ಆರ್.ಹಾಲಪ್ಪ ಮಾತನಾಡಿದರು. ಬಿಸಿಆರ್ಟಿ ಕೇತ್ರಾಧಿಕಾರಿ ಶಿವಪ್ಪ ಸ್ವಾಗತಿಸಿದರು. ಮಹೇಶ್ ವಂದಿಸಿದರು.
ಸರ್ಕಾರಿ ನೌಕರರ ಸಮ್ಮೇಳನ
ಹೊಳೆನರಸೀಪುರ: 2013-14ನೇ ಸಾಲಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಸಮ್ಮೇಳನವು ಮೈಸೂರಿನಲ್ಲಿ ಆ.22ರಂದು ನಡೆಯಲಿದ್ದು, ಈ ಸಮ್ಮೇಳನದಲ್ಲಿ ಭಾಗವಹಿಸಲಿಚ್ಚಿಸುವ ತಾಲೂಕಿನ ಸರ್ಕಾರಿ ನೌಕರರ ಪ್ರತಿನಿಧಿಗಳಿಗೆ ಸರ್ಕಾರವು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿದೆ. ಪ್ರತಿನಿಧಿಗಳು ರು. 300 ಪ್ರತಿನಿಧಿ ಶುಲ್ಕವನ್ನು ಪಾವತಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಸಂಘದ ಅಧ್ಯಕ್ಷ ಟಿ.ಎಸ್.ಕುಮಾರಸ್ವಾಮಿ ಕೋರಿದ್ದಾರೆ.