ಶ್ರೀ ರಾಮಾನುಜರ ಸಹಸ್ರನಾಮೋತ್ಸವ
ಬೇಲೂರು: ಆಚಾರ್ಯ ಶ್ರೀ ರಾಮಾನುಜರ ಸಹಸ್ರನಾಮೋತ್ಸವದ ಪೂರ್ವ ಭಾವಿಯಾಗಿ ಕರ್ನಾಟಕ ಪ್ರಸಿದ್ಧ ಐತಿಹಾಸಿಕ ಹಾಗೂ ಪುಣ್ಯ ಕ್ಷೇತ್ರವಾದ ಬೇಲೂರಿನ ಯತಿರಾಜ ಮಠದಲ್ಲಿ ಅಖಂಡ ವಿಷ್ಣು ಸಹಸ್ರನಾಮ ಹಾಗೂ ಕೋಟಿ ವಿಷ್ಣು ಸಹಸ್ರನಾಮ ಮತ್ತು 501 ನೇ ಶ್ರೀ ರಾಮಾನುಜರ ಸ್ಪರ್ಶಪಾದುಕಾ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರತಿದಿನ ಕರ್ನಾಟಕದ ಖ್ಯಾತ ವಿದ್ವಾಂಸರಿಂದ ಪ್ರವಚನಗಳು ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜು. 4 ರಿಂದ ಆರಂಭಗೊಂಡಿದ್ದು, 20ರ ವರೆಗೆ ಸುದರ್ಶನ ಹೋಮ ನಡೆಯುತ್ತದೆ. ಇದೇ ಸಂದರ್ಭದಲ್ಲಿ ವಿವಿಧ ಮಠಾಧೀಶರು ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಶ್ರೀ ತಿರುಸ್ವಾಮಿ ಹೇಳಿದರು. ಈ ಸಂದರ್ಭದಲ್ಲಿ ವಿಶಾಲಾಕ್ಷಿ, ಬಿ.ಎಸ್. ಕೇಶವನ್, ಶ್ರೀಹರಿ, ದೇವಲಯದ ಧರ್ಮದರ್ಶಿಗಳು, ಅರ್ಚಕ ವೃಂದದವರು ಇದ್ದರು.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಹೊಳೆನರಸೀಪುರ: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ವತಿಯಿಂದ 2013-14ನೇ ಸಾಲಿನಲ್ಲಿ ಶೇಕಡ 85ಕ್ಕಿಂತಲೂ ಮೇಲ್ಪಟ್ಟು ಅಂಕಗಳಿಸಿದ ಎಸ್ಎಸ್ಎಲ್ಸಿಯ 6 ವಿದ್ಯಾರ್ಥಿಗಳಿಗೆ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲೆ-ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.85ಕ್ಕಿಂತಲೂ ಹೆಚ್ಚಿನ ಅಂಕ ಗಳಿಸಿದ ತಾಲೂಕಿನ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ತಾಲೂಕು ಘಟಕದ ಅಧ್ಯಕ್ಷ ಟಿ.ಎಸ್.ಕುಮಾರಸ್ವಾಮಿ ತಿಳಿಸಿದ್ದಾರೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ತಮ್ಮ ಅರ್ಜಿಗಳನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಸಂಘದ ಕಚೇರಿಗೆ ತಲುಪಿಸಬೇಕು. ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಯನ್ನು ಸಲ್ಲಿಸುವಂತೆ ಕೋರಲಾಗಿದ್ದು ಜು. 15ರೊಳಗೆ ನಿಗದಿತ ಅರ್ಜಿಯನ್ನು ಸಲ್ಲಿಸಬೇಕು ಎಂದು ಕೋರದ್ದಾರೆ.
ವಿಷ್ಣು ಸಹಸ್ರನಾಮ ಪಾರಾಯಣ ಇಂದು
ಹೊಳೆನರಸೀಪುರ: ಪಟ್ಟಣದ ಶ್ರೀಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀವಿಷ್ಣು ಸಹಸ್ರನಾಮ ಪಾರಾಯಣ, ಶ್ರೀಯವರ ಉತ್ಸವ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಜು. 8 ರಂದು ಬೆಳಗ್ಗೆ 5 ರಿಂದ ಆರಂಭವಾಗಲಿದೆ ಎಂದು ತಾಲೂಕು ಬ್ರಾಹ್ಮಣ ಯುವ ಸಂಘ ತಿಳಿಸಿದೆ. ಬೆಳಗ್ಗೆ ಶ್ರೀವಿಷ್ಣು ಸಹಸ್ರನಾಮ ಪಾರಾಯಣ ಆರಂಭವಾಗಲಿದೆ. ನಂತರ 7ಕ್ಕೆ ಶ್ರೀಯವರ ಉತ್ಸವ ನಡೆಯಲಿದೆ. ಸಂಜೆ 4ಕ್ಕೆ ಗಾಳಿಪಟ ಸ್ಪರ್ಧೆಯನ್ನು ಸಹ ಏರ್ಪಡಿಸಲಾಗಿದೆ. 5ಕ್ಕೆ ವೇದಬ್ರಹ್ಮ ಎಂ.ಎನ್.ಅಶ್ವತ್ಥನಾರಾಯಣ ಅವಧಾನಿ ಅವರಿಂದ ವಿಷ್ಣು ಸಹಸ್ರನಾಮದ ಪಾರಾಯಣವನ್ನು ನಡೆಸಿಕೊಡಲಿದ್ದಾರೆ ಎಂದು ಸಂಘದ ಕಾರ್ಯದರ್ಶಿ ವೆಂಕಟನರಸಿಂಹನ್ ತಿಳಿಸಿದ್ದಾರೆ.