ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕನ್ನಡ ಸಾಹಿತ್ಯ ಗಟ್ಟಿಗೊಳಿಸಿದ ಗೊರೂರು

Rashmi Kasaragodu
Updated On : 9 Jul 2014, 1:46 am

ಹಾಸನ: ಹಾಸನದ ಗೊರೂರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಜ್ವಲಿಸುವಂತೆ ಮಾಡಿ, ಕನ್ನಡ ಸಾಹಿತ್ಯವನ್ನು ಗಟ್ಟಿಗೊಳಿಸಿದವರು ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರರು ಎಂದು ಯೋಗ ಶಿಕ್ಷಕ ಎಚ್.ಬಿ. ರಮೇಶ್ ಹೇಳಿದರು.
 ಅವರು ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಸಾಹಿತಿ ಗೊರೂರು ಶಿವೇಶ್ ಪ್ರಾಯೋಜಕತ್ವದಡಿಯಲ್ಲಿ ಇತ್ತೀಚೆಗೆ ನಡೆದ 208ನೆಯ ಮನೆ-ಮನೆ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಡಾ.ಗೊರೂರು ಅವರ ಬದುಕು ಮತ್ತು ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಸಾರಸ್ವತ ಲೋಕಕ್ಕೆ ಕೊಡುಗೆ: ಗೊರೂರರ ಕಥೆಗಳು, ಲಲಿತ ಪ್ರಬಂಧ, ಜೀವನಚರಿತ್ರೆ,  ಕಾದಂಬರಿ, ಪ್ರವಾಸ ಕಥನ, ಜಾನಪದ ಸಾಹಿತ್ಯ, ಅನುವಾದಗಳು ಹೀಗೆ ಅನೇಕ ರೀತಿಯ ವೈವಿದ್ಯಮಯ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಇವರ ಅಮೇರಿಕಾದಲ್ಲಿ ಗೊರೂರು ಎಂಬ ಕೃತಿ ಒಳ್ಳೆಯ ಹೆಸರನ್ನು ತಂದು ಕೊಟ್ಟಿತು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೂ ಭಾಜನವಾಗಿದೆ ಎಂದರು.
 ಇವರ ಭೂತಯ್ಯನ ಮಗ ಅಯ್ಯ, ಊರ್ವಶಿ ಕಾದಂಬರಿಗಳು ಚಲನ ಚಿತ್ರಗಳಾಗಿ ಜನ ಮನ್ನಣೆ ಪಡೆದಿವೆ. ನಮ್ಮೂರ ರಸಿಕರು, ಹಳ್ಳಿ ಹಾಡುಗಳು ಮುಂತಾದ ಕೃತಿಯಲ್ಲಿ ವ್ಯಂಗ ಹಾಸ್ಯಗಳೊಂದಿಗೆ ಗ್ರಾಮೀಣ ಸೊಗಡನ್ನು ಚಿತ್ರಿಸಿದ್ದಾರೆ. ಗೊರೂರು ನನ್ನಂತಹ ಅನೇಕ ಬರಹಗಾರರಿಗೆ ಸ್ಫೂರ್ತಿಯಾಗಿದ್ದಾರೆ.
ಚರ್ಚಾಗೋಷ್ಠಿ: ನಂತರ ಕವಿ ಗೋಷ್ಠಿಯ ಆಶಯ ನುಡಿಗಳನ್ನಾಡಿದ ಕ.ಸಾ.ಪ. ಜಿಲ್ಲಾಧ್ಯಕ್ಷ  ಡಾ.ಎಚ್.ಎಲ್. ಜನಾರ್ದನ್, ಜಿಲ್ಲೆಯಲ್ಲಿ ಸಾಹಿತ್ಯಿಕ ಹಾಗೂ ಸಾಂಕೃತಿಕವಾಗಿ ಭದ್ರವಾದ ನೆಲೆಗಟ್ಟನ್ನು ಕಟ್ಟಿಕೊಡುವಲ್ಲಿ ದಶಕಗಳಿಂದಲೂ ಮನೆ-ಮನೆ ಕವಿ ಗೋಷ್ಠಿ ಸಂಘಟನೆಯ ಶ್ರಮ ಅವಿಸ್ಮರಣೀಯ. ಗೊರೂರಂತೆ ಇನ್ನಿತರ ಹಿರಿಯ ಸಾಹಿತಿಗಳ ಕುರಿತು ಚರ್ಚಾಗೋಷ್ಠಿಗಳು ನಡೆಯಬೇಕಿದೆ ಎಂದರು.  ಎನ್.ಎಲ್. ಚನ್ನೆಗೌಡರು 'ನಾ ಮೆಚ್ಚಿದ ಕವಿತೆ' ಎಂಬ ವಿಷಯದಡಿ ದೇವನೂರು ಮಹಾದೆವರ ಲಾಲಿ ಹಾಡು ಎಂಬ ಕವನವನ್ನು ವಾಚಿಸಿ ವಿಶ್ಲೇಷಿಸಿದರು.
ಅಭಿನಂದನೆ: ವೇದಿಕೆಯಲ್ಲಿ ಡಾ.ಕೆ ಕೆ ಜಯಚಂದ್ರಗುಪ್ತ, ಜ. ಹೊ. ನಾರಾಯಣಸ್ವಾಮಿ , ಗೊರೂರು ಶಿವೇಶ್ ಸಂಚಾಲಕ ಕೊಟ್ರೆಶ್ ಎಸ್ ಉಪ್ಪಾರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ತಾಲೂಕು ಸಮ್ಮೆಳನ ಅಧ್ಯಕ್ಷರಾಗಿ ಆಯ್ಕೆಗೊಂಡ ಆಲೂರಿನ ವಳಗರಹಳ್ಳಿ ವಿಶ್ವನಾಥ್, ಸಕಲೇಶಪುರದ ಸುಶೀಲಾ ಸೋಮಶೇಖರ, ಹೊಳೆನರಸಿಪುರದ ಕೌಂಡಿನ್ಯವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.
 ನಂತರ ನಡೆದ ಕವಿ ಗೋಷ್ಠಿಯಲ್ಲಿ ಶೀಟಿ,  ಬಿ.ಎಂ  ಭಾರತಿ ಹಾದಿಗೆ, ಶ್ರೀವಿಜಯ ಹಾಸನ, ಲಲಿತ, ಶಾಂತ ಅತ್ನಿ, ಗೊರೂರು ಅನಂತರಾಜು, ನಾಗರಾಜ್ ಹೆತ್ತೂರು, ಪವನ್ ಕುಮಾರ್ ಸಮುದ್ರವಳ್ಳಿ ವಾಸು, ಚೂಡಾಮಣಿ, ಸುಕನ್ಯ ಮುಕುಂದ, ಗಂಗಾಧರ, ದ್ಯಾವನೂರು ಮಂಜುನಾಥ, ಡಾ. ಕೆ.ಕೆ ಜಯಚಂದ್ರಗುಪ್ತ, ಜ.ಹೊ. ನಾರಾಯಣಸ್ವಾಮಿ ಮುಂತಾದವರು ಕಾವ್ಯ ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ಅಹಮದ್ ಹಗರೆ, ಬಿ. ವೇದಾವತಿ, ಜಯದೇವಪ್ಪ, ಚಂದ್ರಶೇಖರ್, ಸತ್ಯಸುಬ್ರಮಣ್ಯ, ರಂಗೇಗೌಡ, ಸಿ ಕೆ ಹರೀಶ್ ಇತರರು ಇದ್ದರು. ಸಂಚಾಲಕ ಕೊಟ್ರೇಶ್ ಎಸ್.ಉಪ್ಪಾರ್ ಸ್ವಾಗತಿಸಿ, ನಿರೂಪಿಸಿದರು. ಗೊರೂರು ಶಿವೇಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement