ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನನೆಗುದಿಗೆ ಬಿದ್ದ ಮಾರ್ಗಕ್ಕೆ ಹಸಿರು ನಿಶಾನೆ

Rashmi Kasaragodu
Updated On : 9 Jul 2014, 1:44 am

ಹಾಸನ: ಕಳೆದ 17 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜಿಲ್ಲೆಯ ಪ್ರಮುಖ ರೈಲ್ವೆ ಯೋಜನೆಗೆ ಕೊನೆಗೂ ಹಸಿರು ನಿಶಾನೆ ಸಿಕ್ಕಿದೆ.
ಕೇಂದ್ರ ರೈಲ್ವೆ ಖಾತೆ ಸಚಿವ ಡಿ.ವಿ. ಸದಾನಂದಗೌಡ ಮಂಡಿಸಿದ ತಮ್ಮ ಮೊದಲ ರೈಲ್ವೆ ಬಜೆಟ್ನಲ್ಲಿ ಬೆಂಗಳೂರು-ಹಾಸನ-ಮಂಗಳೂರು ಯೋಜನೆಗೆ ಹೆಚ್ಚಿನ ಹಣ ನೀಡುವುದಾಗಿ ಹೇಳುವ ಮೂಲಕ ಆಮೆಗತಿಯಲ್ಲಿ ಸಾಗುತ್ತಿದ್ದ ರೈಲ್ವೆ ಯೋಜನೆಗೆ ಶರವೇಗದಲ್ಲಿ ಚಾಲನೆ ನೀಡಿ 2016ರೊಳಗೆ ರೈಲು ಸಂಚರಿಸುವಂತೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
1996 ರಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ಚಾಲನೆ ನೀಡಿದ ಹಾಸನ-ಬೆಂಗಳೂರು ನೇರ ರೈಲು ಮಾರ್ಗ ಯೋಜನೆ ಆಗಿನಿಂದಲೂ ಆಮೆಗತಿಯಲ್ಲೇ ಸಾಗುತ್ತೆ. ಹಾಸನ- ಶ್ರವಣಬೆಳಗೊಳ-ಕುಣಿಗಲ್ ನೆಲಮಂಗಲ-ಬೆಂಗಳೂರು ನಡುವಿನ 166 ಕಿ.ಮೀ.ಉದ್ದದ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಆರಂಭವಾಗಿ 17 ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಈಗಾಗಲೇ ಹಾಸನ-ಶ್ರವಣ ಬೆಳಗೊಳ-ಹಿರೀಸಾವೆ ವರೆಗೆ ಹಳಿ ಜೋಡಣೆ ಕಾಮಗಾರಿ ಪೂರ್ಣಗೊಂಡಿದ್ದು, ಶ್ರವಣಬೆಳಗೊಳದವರೆಗೆ ರೈಲು 2006 ರಿಂದಲೇ ರೈಲು ಸಂಚರಿಸುತ್ತಿದೆ.
ಅಂತೆಯೇ ಬೆಂಗಳೂರು ಕಡೆಯಿಂದ ನೆಲಮಂಗಲದವರೆಗೂ ಹಳಿ ಜೋಡಣೆ ಕಾರ್ಯ ಪೂರ್ಣಗೊಂಡಿದೆ. ಆದರೆ ಸೋಲೂರು ಬಳಿ ಹಳಿ ನಿರ್ಮಾಣಕ್ಕೆ ಬೇಕಾಗಿರುವ ಭೂಮಿ ಸ್ವಾಧೀನ ಕಾರ್ಯಕ್ಕೆ ಕೊಂಚ ಹಿನ್ನಡೆ ಉಂಟಾಗಿರುವುದು ಯೋಜನೆ ವಿಳಂಬಕ್ಕೆ ಪ್ರಮುಖ ಕಾರಣ. ಇದನ್ನು ಸರಿಪಡಿಸಲು ರಾಜ್ಯ ಸರ್ಕಾರಗಳು ಆಸಕ್ತಿ ತೋರದ ಕಾರಣ ಈ ಯೋಜನೆ ನನೆಗುದಿಗೆ ಬೀಳಲು ಕಾರಣವಾಗಿದೆ. ಆದರೆ ಹೊಸ ರೈಲ್ವೆ ಸಚಿವರು ಈ ಯೋಜನೆಯ ಬಗ್ಗೆ ಆಸಕ್ತಿ ತೋರಿರುವುದರಿಂದ ಜಿಲ್ಲೆಯ ಜನತೆಯಲ್ಲಿ ಮಂದಹಾಸ ಮೂಡಿದೆ. ಜೊಗೆತೆ ತಿಪಟೂರು-ದುದ್ದ ನಡುವೆ ಹೊಸ ರೈಲು ಮಾರ್ಗ, ಚಳ್ಳಕೆರೆ, ಹಿರಿಯೂರು, ಹುಳಿಯೂರು, ಕೆ.ಬಿ. ಕ್ರಾಸ್, ತುರುವೇಕೆರೆ, ಚನ್ನರಾಯಪಟ್ಟಣಕ್ಕೆ ಹೊಸ ರೈಲು ಮಾರ್ಗಕ್ಕೆ ಸದಾನಂದಗೌಡರು ಅನುಮೋದನೆಯನ್ನು ನೀಡಿದ್ದಾರೆ. ಇದಿಷ್ಟು ಜಿಲ್ಲೆಗೆ ರೈಲ್ವೆ ಸಚಿವರು ನೀಡಿರುವ ಕೊಡುಗೆಯಾಗಿದೆ.
ಸಂತಸದ ವಿಷಯ ಅಂದ್ರೆ ಕಳೆದ 18 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ದುದ್ದ-ತಿಪಟೂರು ರೈಲು ಮಾರ್ಗ ಸಮೀಕ್ಷೆ ಕಾರ್ಯ ನಡೆಸುವ ಬಗ್ಗೆ ಕಳೆದ ಬಜೆಟ್ನಲ್ಲಿ ಮಲ್ಲಿಕಾರ್ಜುನ ಖರ್ಗೆ ಘೋಷಣೆ ಮಾಡಿದ್ದರು. ಏಕೆಂದರೆ ಈ ಯೋಜನೆ ಸಾಕಾರವಾದರೆ ಹಾಸನ-ತುಮಕೂರು ನಡುವಿನ ಸಂಚಾರ ಸುಮಾರು 70 ಕಿಮೀ ಕಡಿಮೆಯಾಗಲಿದೆ. ಹಾಲಿ ಹಾಸನದಿಂದ ತುಮಕೂರಿಗೆ ಹೋಗಬೇಕಾದರೆ ಅರಸೀಕೆರೆ ಮಾರ್ಗವಾಗಿಯೇ ಹೋಗಬೇಕು.
ಈಗ ಸಚಿವರು ದುದ್ದ-ತಿಪಟೂರು ಹೊಸ ರೈಲು ಮಾರ್ಗಕ್ಕೆ ಹಸಿರು ನಿಶಾನೆ ತೋರಿರುವುದರಿಂದ ದುದ್ದದಿಂದ ತಿಪಟೂರು ಮೂಲಕ ತುಮಕೂರಿಗೆ ಹೋಗುವುದರಿಂದ ದೂರ ಕಡಿಮೆಯಾಗಲಿದೆ. ಅಲ್ಲದೆ ಯಶವಂತಪುರ-ಮಂಗಳೂರು ರೈಲು ಅರಸೀಕೆರೆಗೆ ಹೋಗದೆ ತಿಪಟೂರು, ದುದ್ದ ಮೂಲಕ ಹಾಸನಕ್ಕೆ ಬರಬಹುದು. ಹೀಗಾದರೆ ಪ್ರಯಾಣದ ಒತ್ತಡ ಕಡಿಮೆಯಾಗಲಿದೆ.
2 ಮೇಲ್ಸೇತುವೆ ಘೋಷಣೆ: ಜಿಲ್ಲೆಯಲ್ಲಿ ಎರಡು ಕಡೆ ಮೇಲ್ಸೇತುವೆ ನಿರ್ಮಾಣ ಮಾಡುವ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪ ಮಾಡಿದ್ದಾರೆ. ಆ ಎರಡು ಯೋಜನೆಗಳಿಗೆ ತಲಾ 17 ಕೋಟಿ ಬೇಕು, ಈಗ ತಲಾ 10 ಕೋಟಿ ಮಂಜೂರು ಮಾಡುವುದಾಗಿ ರೈಲ್ವೆ ಸಚಿವರು ಹೇಳಿದ್ದಾರೆ. ಆದರೆ ಆ ಎರಡು ಮೇಲ್ಸೇತುವೆ ಯಾವುದು ಎನ್ನುವುದನ್ನೂ ಹೇಳಿಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಸನದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊಸ ಬಸ್ ನಿಲ್ದಾಣ, ಹಂಗರಹಳ್ಳಿ ಮತ್ತು ಹೊಳೆನರಸೀಪುರ ಬಳಿ ಮೂರು ಬ್ರಿಡ್ಜ್ ನಿರ್ಮಾಣ ಮಾಡುವಂತೆ ಸದಾನಂದಗೌಡರಿಗೆ ಮನವಿ ಮಾಡಿರುವುದಾಗಿ ತಿಳಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement