ಸಾಧಕರನ್ನು ಗೌರವಿಸಿ
ಸಕಲೇಶಪುರ: ಸರ್ಕಾರ, ಜನ ಪ್ರತಿನಿಧಿಗಳಿಂದ ಸಾಧ್ಯವಾಗದ ಸಮಾಜ ಸೇವಾ ಕೆಲಸಗಳನ್ನು ಸ್ವಯಂ ಸೇವಾ ಸಂಘಟನೆಗಳು ಮಾಡುತ್ತಿವೆ ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಪುರಭವನದಲ್ಲಿ ಶನಿವಾರ ಭಾರತಿಯ ರೆಡ್ಕ್ರಾಸ್ ತಾಲೂಕು ಶಾಖೆಯನ್ನು ಉದ್ಘಾಟಿಸಿ, ರೆಡ್ಕ್ರಾಸ್ ಸಾಮಾಜಿಕ ಚಿಂತನೆಯೊಂದಿಗೆ ನೊಂದವರ ಪಾಲಿಗೆ ಸಂಜೀವಿನಿಯಂತಿರುವ ಇಂತಹ ಸ್ವಯಂ ಸೇವಾ ಸಂಸ್ಥೆಗಳನ್ನು ಗುರುತಿಸಿ, ಸಾಧನೆಗೈದವರಿಗೆ ಸನ್ಮಾನಿಸಿ ಹುರಿದುಂಬಿ ಸುವ ಕೆಲಸವಾಗಬೇಕು ಎಂದರು.
ಸಂಸ್ಥೆಯ ಸದಸ್ಯರಾಗಿ: ರೆಡ್ಕ್ರಾಸ್ ಸಂಸ್ಥೆ ತಾಲೂಕು ಅಧ್ಯಕ್ಷ ತಹಸೀಲ್ದಾರ್ ಪಾರ್ವತಿ ಮಾತನಾಡಿ, ಸ್ವಾತಂತ್ರ್ಯ ಪೂರ್ವ ಇತಿಹಾಸವಿರುವ ರೆಡ್ ಕ್ರಾಸ್, ಜಾತಿ ಭೇದವಿಲ್ಲದೆ ಸೇವೆ ಮಾಡುತ್ತಿದೆ. ಯುವಕರು ಸಂಸ್ಥೆಯ ಸದಸ್ಯರಾಗಿ ಇಲ್ಲಿನ ಹೊಸ ಶಾಖೆಯು ರಾಷ್ಟ್ರ ಮಟ್ಟದಲ್ಲಿ ಬೆಳಗುವಂತಾಗಬೇಕು ಎಂದರು.
ಸ್ವಾತಂತ್ರ್ಯ ಹೋರಾಟಗಾರ ಶಿವಣ್ಣ ಮಾತನಾಡಿ, ಸಮಾಜಮುಖಿಯಾಗಿ ದುಡಿಯುವವರ ಹೆಸರು ಶಾಶ್ವತವಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಂತಹವರ ಸೃಷ್ಟಿ ಕಾಣದಾಗಿದೆ. ದೇಶಾಭಿಮಾನ, ಮಾನವೀಯ ಮೌಲ್ಯಗಳು ಯುವ ಜನರಲ್ಲಿ ಕಡಿಮೆಯಾಗಿ ಸ್ವಾರ್ಥ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎಂದು ಹೇಳಿದರು.
ಭಾರತಿಯ ರೆಡ್ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಹುಟ್ಟು, ಬೆಳವಣಿಗೆ ಹಾಗೂ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.
ರೆಡ್ಕ್ರಾಸ್ ತಾಲೂಕು ಅಧ್ಯಕ್ಷೆ ಶಾರದ ಗುರುಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಗೌರಿ, ವೈಷ್ಣವಿ ಪ್ರಾರ್ಥಿಸಿದರು. ಖಜಾಂಚಿ ರವಿಕುಮಾರ್ ಸ್ವಾಗತಿಸಿದರು.
ಪುರಸಭೆ ಹಂಗಾಮಿ ಅಧ್ಯಕ್ಷ ಮುಖೇಶ್, ರೆಡ್ಕ್ರಾಸ್ ಜಿಲ್ಲಾಧ್ಯಕ್ಷ ಎಚ್.ಪಿ.ಮೋಹನ್ ಸಂಸ್ಥೆ ನಿರ್ದೇಶಕ ಶಬ್ಬೀರ್ ಅಹಮದ್, ಜಿಲ್ಲಾ ಪಂಚಾಯಿತಿ ಸದಸ್ಯೆ ಸುಲೋಚನಾ ರಾಮಕೃಷ್ಣ ಇತರರು ಇದ್ದರು.