ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಿಲ್ಲೆಗೆ ಮೋಡಿ ಮಾಡದ ಮೋದಿ ಬಜೆಟ್

Rashmi Kasaragodu
Updated On : 11 Jul 2014, 1:12 am

ದಯಾಶಂಕರ ಮೈಲಿ
ಹಾಸನ: ಕಾಫಿ ಬೆಳೆ ಅಭಿವೃದ್ದಿಗಾಗಿ ಇರುವ ಕಾಫಿ ಬೋರ್ಡ್ ಮತ್ತು ಏಲಕ್ಕಿ, ಮೆಣಸಿನಾಭಿವೃದ್ಧಿಗಾಗಿ ಇರುವ ಸಾಂಬಾರ ಮಂಡಳಿಗಳು ಆಡಳಿತ ಕೇಂದ್ರ ಸರ್ಕಾರದ ಅಧೀನದಲ್ಲಿ ಇವೆ. ಹಾಗಾಗಿ ಗುರುವಾರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿದ ಬಜೆಟ್ನಲ್ಲಿ ಮಳೆ ಇಲ್ಲದೇ ಕಾಫಿ, ಏಲಕ್ಕಿ, ಮೆಣಸು ಮತ್ತು ಏಲಕ್ಕಿ ಬೆಳೆಗಳನ್ನು ಕಳೆದುಕೊಂಡಿರುವ  ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕಿತ್ತು.
 ಆದರೆ ಆ ಬಗ್ಗೆ ಬಜೆಟ್ನಲ್ಲ ಇದರ ಪ್ರಸ್ತಾಪ ಮಾಡಿಲ್ಲ. ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳು ಸೇರಿದಂತೆ ಚಾಮರಾಜನಗರ ಜಿಲ್ಲೆ ಬಿಳಿರಂಗನ ಬೆಟ್ಟದ ಆಸುಪಾಸಿನಲ್ಲಿ ಕಾಫಿ, ಮೆಣಸು, ಏಲಕ್ಕಿಯನ್ನು ಬೆಳೆಯಲಾಗುತ್ತದೆ. ಆದರೆ ಮಳೆಯಿಲ್ಲದೇ ಅರೇಬಿಕಾ ಕಾಫಿಗೆ ಬೋರರ್ ರೋಗ ತಗುಲಿ ಶೇ. 75 ರಷ್ಟು ಹಾಳಾಗಿದೆ. ಕಾಂಡಕೊರಕ ರೋಗ ತಗುಲಿ ರೋಬಸ್ಟಾ ಕಾಫಿ ಸಂಪೂರ್ಣ ನಾಶವಾಗಿದೆ.
 ಮಳೆ ಇಲ್ಲದೇ ಮೆಣಸು ಮತ್ತು ಏಲಕ್ಕಿ ಕೂಡ ನಷ್ಟವಾಗಿದೆ.  ಈ ನಷ್ಟದ ಬಗ್ಗೆ ಸರ್ವೆ ಮಾಡಿ ವರದಿ ತರಿಸಿಕೊಂಡು ಪರಿಹಾರ ನೀಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಬಜೆಟ್ನಲ್ಲಿ ಪ್ರಸ್ತಾಪಿಸಬೇಕಿತ್ತು. ಅದನ್ನು ಮಾಡಿಲ್ಲ ಎಂಬುದು ಕಾಫಿ ಬೆಳೆಗಾರರ ಅಸಮಾಧಾನವಾಗಿದೆ.
ಈಗಾಗಲೇ ಕಾಫಿ ಬೋರ್ಡ್ ಮತ್ತು ಸಾಂಬಾರ ಮಂಡಳಿ ಮೂರು ಬೆಳೆಗಳು ನಷ್ಟವಾಗಿರುವ ಬಗ್ಗೆ ಮಾಹಿತಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಬಜೆಟ್ನಲ್ಲಿ ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆಗಳಿರುತ್ತದೆ ಎಂಬ ಆಶಾಭಾವನೆ ಹೊಂದಲಾಗಿತ್ತು. ಆದರೆ ಮಾಡಿಲ್ಲ ಎನ್ನುತ್ತಾರೆ ಬೇಲೂರು ತಾಲೂಕಿನ ಚೀಕನಹಳ್ಳಿ ಕಾಫಿ ಬೆಳೆಗಾರ ಪ್ರಸನ್ನಗೌಡ.
ಕಾಡಾನೆ ಕಾರಿಡಾರ್: ಬಹಳ ಹಿಂದಿನಿಂದಲೂ ಜಿಲ್ಲೆಯ ಹಲವೆಡೆ ಕಾಡಾನೆಗಳ ಹಾವಳಿ ಇದೆ. ಪರಿಣಾಮ ರೈತರು ಮತ್ತು ಕಾಡಾನೆಗಳ ನಡುವಿನ ಸಂಘರ್ಷ ನಡೆಯುತ್ತಲೇ ಇದೆ. ಮಾನವರಿಂದ ಕಾಡಾನೆಗಳು, ಕಾಡಾನೆಗಳಿಂದ ಮಾನವರು ಹತರಾಗುತ್ತಿರುವುದು ನಿರಂತರವಾಗಿದೆ. ಇದನ್ನು ತಪ್ಪಿಸಲು ಕಾಡಾನೆಗಳ ಕಾರಿಡಾರ್ ಸ್ಥಾಪಿಸಬೇಕೆಂಬ ಬೇಡಿಕೆ ಬಹಳ ವರ್ಷಗಳಿಂದ ಇದೆ. ಕಾರಿಡಾರ್ ನಿರ್ಮಾಣಕ್ಕೆ ಕೇಂದ್ರ ಅರಣ್ಯ ಮತ್ತು ಪರಿಸರ ನಿರ್ದೇಶನಾಲಯದ ಅಧಿಕೃತ ಮುದ್ರೆ ಬೇಕು. ಆದ್ದರಿಂದ ಬಜೆಟ್ನಲ್ಲಿ ಕಾಡಾನೆಗಳ ಕಾರಿಡಾರ್ ನಿರ್ಮಾಣದ ಬಗ್ಗೆ  ಘೋಷಣೆ ಮಾಡಬೇಕಿತ್ತು ಎಂದು ಹೇಳಲಾಗುತ್ತಿದೆ.
ಕೈಗಾರಿಕಾ ಆರ್ಥಿಕ ವಲಯ: ಹಾಸನ ನಗರದಲ್ಲಿ ವಿಶೇಷ ಕೈಗಾರಿಕಾ ಆರ್ಥಿಕ ವಲಯವಿದೆ. ಆದರೆ ಇಲ್ಲಿರುವ ಕೈಗಾರಿಕೆಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸದೇ ಆನೇಕ ಕೈಗಾರಿಕೆಗಳು ನಿಂತಿವೆ. ಕೈಗಾರಿಕೆ ಮತ್ತು ಕೃಷಿ ವಲಯಗಳ ಬೆಳವಣಿಗೆ ಪೂರಕವಾಗುವ ಹಾಸನ ವಿಮಾನ ನಿಲ್ದಾಣ ಕಾಮಗಾರಿ ಆರಂಭಕ್ಕೆ ಬಜೆಟ್ನಲ್ಲಿ ಪ್ರಸ್ತಾಪ ಮಾಡಬೇಕಿತ್ತು.
 ಆದರೆ ವಿದ್ಯುತ್ ಉತ್ಪಾದನೆ ಘಟಕಗಳಿಗೆ 10 ವರ್ಷಗಳು ತೆರಿಗೆ ವಿಧಿಸದೇ ಇರುವುದು ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾಗಿದೆ ಎಂಬುದು ಹಾಸನ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಒಕ್ಕೂಟದ ಅಧ್ಯಕ್ಷ ಎಚ್.ಟಿ. ಚಂದ್ರಶೇಖರ್ ಅವರ ಅನಿಸಿಕೆ.
ಆಲೂಗಡ್ಡೆ ಸಂಶೋಧನಾ ಕೇಂದ್ರ: ಹಾಸನ ಜಿಲ್ಲೆಯ ವಾತಾವರಣ ಮತ್ತು ಭೂಮಿ ಆಲೂಗಡ್ಡೆ ಬೆಳೆಯುವುದಕ್ಕೆ ಹೇಳಿ ಮಾಡಿಸಿದಂತೆ ಇದೆ. ಆದರೆ ನಾಲ್ಕೈದು ವರ್ಷಗಳಿಂದ ಆಲೂಗಡ್ಡೆಗೆ ಅಂಗಮಾರಿ ರೋಗ ತಗುಲಿದೆ. ಈ ರೋಗ ತಡೆಯುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆಲೂಗಡ್ಡೆ ಸಂಶೋಧನೆ ಕೇಂದ್ರ ಆರಂಭಿಸಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಿಂದೆಯೇ ಕೇಂದ್ರಕ್ಕೆ ಮನವಿ ನೀಡಿದ್ದಾರೆ. ಆದರೆ ಇದೂ ಬಜೆಟ್ನಲ್ಲಿ ನೀಡಿಲ್ಲ ಎಂಬುದು ರೈತರ ಆರೋಪ.
ತೆಂಗಿಗೆ ಪರಿಹಾರ ತಾರತಮ್ಯ: ಹಾಸನ ಸೇರಿದಂತೆ ರಾಜ್ಯಾದ್ಯಂತ ಭೂಮಿಯಲ್ಲಿ ತೇವಾಂಶದ ಕೊರತೆಯಿಂದ ತೆಂಗಿನ ಮರಗಳು ಒಣಗಿ ಹೋಗಿವೆ. ಈ ಬಗ್ಗೆ ಕೇಂದ್ರ ತಜ್ಞರ  ಭೇಟಿ ನೀಡಿ ಕೇಂದ್ರಕ್ಕೆ ವರದಿ ಸಲ್ಲಿಸಿತ್ತು. ನಂತರ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳುವ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪ ಮಾಡಿಲ್ಲ ಎಂಬುದು ತೆಂಗು ಬೆಳೆಗಾರರ ಅಸಮಾಧಾನ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement