ಪಿಡಿಒ ಲೋಕಾಯುಕ್ತ ಬಲೆಗೆ
ಅರಸೀಕೆರೆ: ಆಶ್ರಯ ಯೋಜನೆಯಲ್ಲಿ ಜನತಾ ಮನೆಯನ್ನು ಮಂಜೂರು ಮಾಡಲು ಇಲ್ಲಿನ ಗ್ರಾಪಂ ಅಭಿವೃದ್ಧಿ ಅಧಿಕಾರಿ 3 ಸಾವಿರ ರು. ಲಂಚ ಪಡೆಯುತ್ತಿರುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ತಾಲೂಕಿನ ಹಿರಿಯೂರು ಗ್ರಾಮ ಪಂಚಾಯ್ತಿಯ ವ್ಯಾಪ್ತಿಯ ಭೈರಗೊಂಡನಹಳ್ಳಿ ಗ್ರಾಮದ ಭೋವಿ ಕಾಲೋನಿ ವಾಸಿಯಾದ ತಮ್ಮಯ್ಯ ಎಂಬುವವರು ಬಸವ ವಸತಿ ಯೋಜನೆಯಲ್ಲಿ ಮನೆಯನ್ನು ಕೋರಿ ಅರ್ಜಿ ಸಲ್ಲಿಸಿದರು. ಆದರೆ ಹಿರಿಯೂರು ಗ್ರಾಪಂನ ಅಭಿವೃದ್ದಿ ಅಧಿಕಾರಿ ಪುಟ್ಟಸ್ವಾಮಿ, ಮನೆ ಮಂಜೂರು ಮಾಡಲು 5 ಸಾವಿರ ರು. ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ತಮ್ಮಯ್ಯ ಹಾಸನ ಲೋಕಾಯುಕ್ತ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ನರಸಿಂಹಮೂರ್ತಿ ಮತ್ತು ಸಿಬ್ಬಂದಿ ರಾಮಕೃಷ್ಣ ನೇತೃತ್ವದ ತಂಡ ಗುರುವಾರ ತಮ್ಮಯ್ಯನಿಂದ ಹಣ ಸ್ವೀಕರಿಸುತ್ತಿದ್ದ ಪುಟ್ಟಸ್ವಾಮಿಯನ್ನು ಬಂಧಿಸಿದ್ದಾರೆ.