ಪ್ರತಿಭಟನೆ 3ನೇ ದಿನಕ್ಕೆ
ಹಾಸನ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಪ್ರಿಕಾಟ್ ಮೆರಿಡೆನ್ ಕಾರ್ಮಿಕರು ಕೈಗೊಂಡಿದ್ದ ಅನಿರ್ದಿಷ್ಟಾವಧಿ ಮುಷ್ಕರ ಗುರುವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನಾಕಾರರು ನಗರದ ಜಿಲ್ಲಾಧಿಕಾರಿ ಕಚೇರಿಗೆ ಬಂದು ಜಿಲ್ಲಾಧಿಕಾರಿಗೆ ಮನವಿ ನೀಡಿದರು. ಪ್ರಿಕಾಟ್ ಮೆರಿಡೆನ್ ಕಾರ್ಖಾನೆಯ ಆಡಳಿತ ಮಂಡಳಿ ಟ್ರೈನಿ ಆಪರೇಟರ್ ಕೆಲಸಕ್ಕೆ ವಿದ್ಯಾರ್ಥಿಗಳನ್ನು ಕಾಲೇಜು ಕ್ಯಾಂಪಸ್ನಲ್ಲಿ ಆಯ್ಕೆ ಮಾಡಿಕೊಂಡಿದ್ದರು. ಕೆಲಸಕ್ಕೆ ಸೇರಿದ ಮೊದಲ ವರ್ಷ ಟ್ರೈನಿಯಾಗಿ ದುಡಿಸಿಕೊಂಡಿದ್ದರು. ನಂತರ ತಿಂಗಳಿಗೆ 7 ಸಾವಿರ ರು. ನಂತೆ ವೇತನವನ್ನು ನೀಡುತ್ತಿದ್ದಾರೆ. ಆದರೆ ಕಾರ್ಮಿಕರನ್ನು ಕಾರ್ಖಾನೆ ಆಡಳಿತ ಮಂಡಳಿ ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ದೂರಿದರು. ಸಂದರ್ಶನಲ್ಲಿ ಕೆಲಸದಿಂದ ತೆಗೆದು ಹಾಕಿದ್ದು, ಅದನ್ನು ಕೇಳಲು ಹೋದರೆ ವಿನಾ ಕಾರಣವನ್ನು ನೀಡುತ್ತಿದ್ದಾರೆ. ಹೊರ ರಾಜ್ಯಗಳಿಂದ ಸಿಬ್ಬಂದಿ ತೆಗೆದುಕೊಳ್ಳುವ ಉದ್ದೇಶದಿಂದ ಸ್ಥಳೀಯರನ್ನು ಕಡೆಗಣಿಸಿ ಹೊರಗಿನಿಂದ ಬರುವವರಿಗೆ ಆದ್ಯತೆ ನೀಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸಿದ್ದರೂ ಅದನ್ನು ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದರು. ಆದ್ದರಿಂದ ಕೂಡಲೇ ಕೆಲಸದಿಂದ ತೆಗೆದು ಹಾಕಿರುವ ಸಿಬ್ಬಂದಿ ವಾಪಸ್ ಕೆಲಸಕ್ಕೆ ತೆಗೆದುಕೊಳ್ಳುವಂತೆ ಆಗ್ರಹಿಸಿದರು. ಕಾರ್ಮಿಕರಾದ ಪುನೀತ್, ಪ್ರದೀಪ್, ದಿಲೀಪ್ಕುಮಾರ್, ಅಶ್ವತ್, ಮಧು, ಮಿಥುನ್, ಪ್ರಕಾಶ್, ಮಧುಸೂದನ್ ಹಾಗೂ ಇತರರು ಇದ್ದರು.
ಹಾಸನ ಜಿಪಂ ಅಧ್ಯಕ್ಷ ಚುನಾವಣೆ 23ಕ್ಕೆ
ಹಾಸನ: ಜಿಪಂ ಮೂರನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಜು.23ರ ಮಧ್ಯಾಹ್ನ 3 ಕ್ಕೆ ಚುನಾವಣಾ ಸಭೆಯನ್ನು ಜಿಪಂ ಕಚೇರಿ ಸಭಾಂಗಣದಲ್ಲಿ ನಿಗದಿಪಡಿಸಿದೆ. ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ ಎಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.