ಮಾಳೇನಹಳ್ಳಿ ಪ್ರಕರಣ: ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ, ಆರೋಪಿಗಳ ಪತ್ತೆಗಾಗಿ ಶೋಧ
ಹಾಸನ: ಬೇಲೂರು ತಾಲೂಕಿನ ಮಾಳೇನಹಳ್ಳಿ ಗ್ರಾಮದ ಜನರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಹಾಗೂ ತನಿಖೆಗಾಗಿ ಅರಸೀಕರೆ ಉಪ-ವಿಭಾಗದ ಡಿವೈಎಸ್ಪಿ ಮತ್ತು ಬೇಲೂರು ವೃತ್ತದ ಸಿಪಿಐ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು. ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು ತಾಲೂಕು, ಲಕ್ಯ ಹೋಬಳಿ ಬೆಳವಾಡಿ ಕೆರೆ ಸೇರಿದಂತೆ ಸುಮಾರು 42 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಯಗಚಿ ಡ್ಯಾಮ್ನಿಂದ ನೀರನ್ನು ಮಾಳೇನಹಳ್ಳಿ ಮುಖಾಂತರ ಕಾಲುವೆಯಲ್ಲಿ ಹರಿಸುವ ಯೋಜನೆ ಕಾಮಗಾರಿ ಜಾರಿ ಹಂತದಲ್ಲಿದೆ ಎಂದರು. ಈ ಕಾಲುವೆಯನ್ನು ತೆಗೆಯುವಾಗ ಬೇಲೂರು ತಾಲೂಕಿನ ಮಾಳೇನಹಳ್ಳಿ ಗ್ರಾಮಸ್ಥರು ಅಡ್ಡಿಪಡಿಸುವ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಭವಾಗಿರುತ್ತದೆ. ಮಾಳೇನಹಳ್ಳಿ ಗ್ರಾಮದ ಯಗಚಿ ಹಿನ್ನೀರಿಗೆ ಅಡ್ಡಲಾಗಿ ನಿರ್ಮಿಸಿರುವ ಕಳಸಪುರ ಮಾರ್ಗವಾಗಿ ದೇವನೂರು, ಪಂಚನಹಳ್ಳಿ ಮಾರ್ಗವಾಗಿ ಹೋಗಿರುವ ನಾಲೆ ಕಾಮಗಾರಿಯನ್ನು ಮಾಳೇನಹಳ್ಳಿ ಗ್ರಾಮದ ಗ್ರಾಮಸ್ಥರು ಪರಿಹಾರ ಸಿಕ್ಕಿಲ್ಲವೆಂದು ಕಾಮಗಾರಿ ನಡೆಯದಂತೆ ಆಗಾಗ್ಗೆ ತಡೆಯುತ್ತಿದ್ದರು. ಈ ಸಂಬಂಧ ಜು.4ರಂದು ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಸುಮಾರು 42 ಹಳ್ಳಿಗಳ ಸುಮಾರು 1500 ಗ್ರಾಮಸ್ಥರು ಮಾಳೇನಹಳ್ಳಿ ಗ್ರಾಮಕ್ಕೆ ಬಂದು ಗ್ರಾಮಸರೊಂದಿಗೆ ಗಲಾಟೆ ಮಾಡಿ ಕಲ್ಲುಗಳಿಂದ ಹೊಡೆದು ಗಾಯಪಡಿಸಿ ಮನೆಗಳ ಮೇಲೆ ಕಲ್ಲುತೂರಿದ್ದಾರೆ. ಈ ಸಂಬಂಧ ಕಂಟ್ರ್ಯಾಕ್ಟರ್ ರಾಜೇಶ್ ಹಾಗೂ ಇತರೆ ಸುಮಾರು 500 ಜನರ ಮೇಲೆ ಪಿರ್ಯಾದುದಾರ ಮಾಳೇನಹಳ್ಳಿಯ ಹೇಮಂತ್ ಜು. 4 ರಂದು ಬೇಲೂರು ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ ಎಂದು ಹೇಳಿದರು. ನಾಲೆಯ ಕಾಮಗಾರಿಯ ಕೆಲಸ ಮುಂದುವರೆದಿದ್ದು ಪರಿಸ್ಥಿತಿ ಶಾಂತವಾಗಿದೆ. ಸ್ಥಳದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.