ಅನಿವಾಸಿ ಕನ್ನಡಿಗರಿಂದ ಕನ್ನಡ ಕಟ್ಟುವ ಕೆಲಸ
ಹಾಸನ: ವಿದೇಶಗಳಲ್ಲಿ ಇರುವ ಕನ್ನಡಿಗರನ್ನು ಕರೆ ತಂದು, ಕನ್ನಡವನ್ನು ಕಟ್ಟುವಂತಹ ಕೆಲಸವನ್ನು ಮುಂದಿನ ದಿನಗಳಲ್ಲಿ ಯಶಸ್ಸಿಯಾಗಿ ಮಾಡಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಹೇಳಿದ್ದಾರೆ.
ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಶುಕ್ರವಾರ ನಡೆದ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರವೇ ಕಾರ್ಯಕರ್ತರು ನಾಡು, ನುಡಿ, ನೆಲ, ಜಲ ವಿಚಾರದಲ್ಲಿ ನಿರಂತರವಾದ ಹೋರಾಟವನ್ನು ಮಾಡುತ್ತಿದ್ದು, ರಾಜ್ಯವಲ್ಲದೆ ವಿಶ್ವವ್ಯಾಪಿ ಕರವೇ ಅಭಿಮಾನಿಗಳ ಬಳಗವನ್ನು ಹೊಂದಿದೆ. ನಾಡಿನ ಸಂರಕ್ಷಣೆ ವಿಚಾರದಲ್ಲಿ ಶ್ರಮಿಸುವ ಮೂಲಕ ದೊಡ್ಡ ಸಂಘಟನೆಯಾಗಿ ಬೆಳೆದಿದೆ ಎಂದರು.
ಶಿಸ್ತುಬದ್ಧ ಕೆಲಸ: ರಾಜ್ಯದಲ್ಲಿ 2 ಲಕ್ಷ ಮಂದಿ ಕರವೇ ಕಾರ್ಯಕರ್ತರಿದ್ದು, ಜಿಲ್ಲೆಯಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ಸದಸ್ಯತ್ವವನ್ನು ಹೊಂದಿದ್ದಾರೆ.
ಕರವೇ ಸಂಘಟನೆಯು ಕೇವಲ ಒಂದು ಸಮುದಾಯಕ್ಕೆ ಮೀಸಲಾಗಿದೆ. ಎಲ್ಲಾ ಸಮುದಾಯದೊಂದಿಗೆ ಉತ್ತಮವಾದ ಬಾಂಧವ್ಯವನ್ನು ಹೊಂದುವ ಮೂಲಕ ನಾಡನ್ನು ಕಟ್ಟುವಂತಹ ಕೆಲಸವನ್ನು ಮಾಡಲಾಗುತ್ತಿದೆ.
ಸಂಘಟನೆಯನ್ನು ಶಿಸ್ತುಬದ್ಧವಾಗಿ ಕಟ್ಟಲಾಗಿದೆ. ಸಂಘಟನೆಯ ಉದ್ದೇಶದ ಬಗ್ಗೆ ಜನರಲ್ಲಿ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದರು.
ಸಂತಸ: ಸಿದ್ದಗಂಗಾ ಸ್ವಾಮೀಜಿ ಸೇರಿದಂತೆ ಪ್ರಸ್ತುತ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀಗಳು ಹಾಗೂ ಪುಷ್ಪಗಿರಿ ಮಠದ ಶ್ರೀಗಳು ಕೂಡ ಕರವೇ ಸದಸ್ಯತ್ವ ಪಡೆದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೂ ಮೊದಲು ನಗರದಲ್ಲಿ ಆಟೋ ಚಾಲಕರು ಮೆರವಣಿಗೆ ನಡೆಸಿದರು.
ಆದಿಚುಂಚನಗಿರಿ ಶಾಖಾ ಮಠದ ಪೀಠಾಧ್ಯಕ್ಷ ಶಂಭುನಾಥ ಸ್ವಾಮೀಜಿ, ಪುಷ್ಪಗಿರಿ ಮಠದ ಪೀಠಾಧೀಶ ಸೋಮಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರವೇ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್, ರಾಜ್ಯ ಉಪಾಧ್ಯಕ್ಷ ಅಂಜನಪ್ಪ, ಪ್ರಧಾನ ಸಂಚಾಲಕ ಬಸವರಾಜ್, ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಅಶ್ವಿನಿಗೌಡ, ರೇಣುಕಾ ಪರಮೇಶ್, ಜಿಲ್ಲಾ ಉಪಾಧ್ಯಕ್ಷ ಹರೀಶ್ ಗೌಡ, ಬಳಗಟ್ಟೆ ಲೋಕೇಶ್, ಶಿವು, ಗಿರೀಶ್, ಕಾರ್ಯದರ್ಶಿ ರಫೀಕ್ ದರ್ಬಾರ್, ಸಮೀರ್ ಅಹಮದ್, ಜಗದೀಶ್, ಹೇಮಾಲತಾ, ವೈದ್ಯರಾದ ಬಶೀರ್, ಭಾರತಿ ಹಾಗೂ ಇತರರು ಇದ್ದರು.