ಆಹಾರ, ಗುಣಮಟ್ಟದ ಬಗ್ಗೆ ವ್ಯಾಪಾರಿಗಳಿಗೆ ಜಾಗೃತಿ
ಹಾಸನ: ಆಹಾರ ಮತ್ತು ಗುಣಮಟ್ಟ ಕಾಯ್ದೆಯ ಬಗ್ಗೆ ಗುರುವಾರ ವ್ಯಾಪಾರಸ್ಥರಿಗೆ ಅರಿವು ಕಾರ್ಯಕ್ರಮ ನಡೆಯಿತು. ನಗರದ ಕಟ್ಟಿನಕೆರೆ ಮಾರುಕಟ್ಟೆಯ ಹಳೇ ಮುನ್ಸಿಪಾಲ್ಟಿ ಕಚೇರಿ ಒಳಗೆ ನಗರ ಕಟ್ಟಿನಕೆರೆ ಮಾರುಕಟ್ಟೆ ಹಿತರಕ್ಷಣಾ ಸಮಿತಿ, ಡಾ. ರಾಜಕುಮಾರ್ ಅಭಿಮಾನಿಗಳ ಸಂಘ, ಬಾಳೆಹಣ್ಣು ಮಾರಾಟಗಾರರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರಗಳ ಸಂಯುಕ್ತಾಶ್ರಯದಲ್ಲಿ ವ್ಯಾಪಾರಸ್ಥರಿಗೆ ಅರಿವು ಕಾರ್ಯಕ್ರಮ ನಡೆಯಿತು. ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಬಸವೇಗೌಡ ಮಾತನಾಡಿ, ಹಣದ ದುರಾಸೆಗೆ ಕೆಲ ವ್ಯಾಪಾರಸ್ಥರು ಗುಣಮಟ್ಟದ ಆಹಾರ ಪದಾರ್ಥಕ್ಕೆ ಕಲಬೆರಕೆ ಮಾಡುತ್ತಿದ್ದಾರೆ. ಆದ್ದರಿಂದ ಕಲಬೆರಕೆ ಆಹಾರ ಪದಾರ್ಥಗಳನ್ನು ತಡೆಗಟ್ಟಲು ಎಲ್ಲರ ಸಹಕಾರ ಅಗತ್ಯ ಎಂದರು. ಬಾಳೆಹಣ್ಣು ಮಾರಾಟಗಾರರ ಸಂಘದ ಅಧ್ಯಕ್ಷ ಸಮೀರ್ ಅಹಮದ್ ಮಾತನಾಡಿ, ಆಹಾರ ಗುಣಮಟ್ಟದ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಮುನುಷ್ಯನಿಗೆ ಬೇಕಾದ ಅಗತ್ಯ ಪದಾರ್ಥಗಳ ಗುಣಮಟ್ಟ ಕಾಪಾಡಲು ಕಾನೂನು ಬಂದಿದೆ ಎಂದರು. ನಗರಸಭೆ ಸದಸ್ಯ ಎಚ್.ಬಿ.ಗೋಪಾಲ್, ಆಹಾರ ಸುರಕ್ಷತ ಅಧಿಕಾರಿಗಳಾದ ಮರುಳಯ್ಯ, ವಿನಯ್, ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಪ್ರಶಾಂತ್, ಸಮಾಜ ಸೇವಕ ವಿಷ್ಣು ಉಪಾಧ್ಯಾಯ, ಮಾರುಕಟ್ಟೆಯ ದಿನೇಶ್ ಹಾಗೂ ಇತರರು ಇದ್ದರು.