ಎಪಿಎಂಸಿ ಕಾಯ್ದೆಗೆ ತಿದ್ದುಪಡಿ: ಶಾಮನೂರು
ಹಾಸನ: ಹಣ್ಣು ಹೂವು, ತರಕಾರಿ ಉತ್ಪನ್ನಗಳ ಮೇಲೆ ಮಾರುಕಟ್ಟೆ ಶುಲ್ಕ ವಿಧಿಸುವುದನ್ನು ರದ್ದುಪಡಿಸಿ ಬಳಕೆದಾರರ ಶುಲ್ಕ ಆಕರಣೆಗೆ ಅವಕಾಶ ಕಲ್ಪಿಸಿದ್ದು, ಮಾರುಕಟ್ಟೆ ಶುಲ್ಕ ಪಾವತಿ ವಿಳಂಬವಾದಲ್ಲಿ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ 1966ರ ಕಲಂ 65-ಎ ರಲ್ಲಿನ ಅವಕಾಶದ ಮೇರೆಗೆ ದಂಡ ವಿಧಿಸಲಾಗುವುದು ಎಂದು ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ದಲಾಲರು, ಆಮದುದಾರರು ಮತ್ತು ಖರೀದಿದಾರರು ಒಂದು ವಾರದಲ್ಲಿ ವಸೂಲಿ ಮಾಡಿದ ಮತ್ತು ತುಂಬ ಬೇಕಾದ ಮಾರುಕಟ್ಟೆ ಶುಲ್ಕವನ್ನು ಮುಂದಿನ ವಾರದ ಬುಧವಾರದೊಳಗೆ ಸಮಿತಿಗೆ ತುಂಬಬೇಕು. ಇದಕ್ಕೆ ವಿಫಲರಾದಲ್ಲಿ ಪಾವತಿಸಬೇಕಾದ ಮಾರುಕಟ್ಟೆ ಶುಲ್ಕದ ಜೊತೆಗೆ ಮಾರುಕಟ್ಟೆ ಶುಲ್ಕದ ಶೇ.12ರಷ್ಟು ದಂಡವನ್ನು ವಿಳಂಬವಾದ ಅಥವಾ ವಿಫಲವಾದ ಮೊದಲನೇ ದಿನದಂದು ತುಂಬ ತಕ್ಕದ್ದು. ತರುವಾಯದ ಬಾಕಿ ವಿಳಂಬ ಅಥವಾ ವಿಫಲತೆಯ ಪ್ರತಿ ದಿನಕ್ಕೆ ಶೇ.1ಕ್ಕೆ ಸಮನಾದಷ್ಟು ಹೆಚ್ಚುವರಿ ದಂಡವನ್ನು ಗರಿಷ್ಟ ಶೇ.30ರವರೆಗೆ ತುಂಬಲು ಉಪನಿಯಮಗಳಲ್ಲಿ ಅವಕಾಶ ಕಲ್ಪಿಸಿದೆ. ಕಾಯ್ದೆಯಲ್ಲಿನ ಅವಕಾಶಗಳ ಮೇರೆಗೆ ಕ್ರಮ ಜರುಗಿಸಲಾಗುತ್ತಿರುವುದು ಸರಿಯಿದೆ ಎಂದು ತಿಳಿಸಿದ್ದಾರೆ.
ಮಾರುಕಟ್ಟೆ ಶುಲ್ಕವನ್ನು ವಾರಕ್ಕೆ ಒಮ್ಮೆ ಸಮಿತಿಗೆ ಸಲ್ಲಿಸುವ ಪದ್ಧತಿ ಜಾರಿಯಲ್ಲಿದ್ದು ಈ ಪದ್ಧತಿ ಸಮಿತಿಯ ಆರ್ಥಿಕ ಹಿತದೃಷ್ಟಿಯಿಂದ ಹಾಗೂ ಪೇಟೆ ಕಾರ್ಯಕರ್ತರ ವಹಿವಾಟಿನ ಮೇಲೆ ನಿಯಂತ್ರಣ ನಡೆಸುವುದಕ್ಕೆ ಪ್ರಸ್ತುತ ಕ್ರಮವು ಪೂರಕವಾಗಿದೆ. ಪರವಾನಗಿ ಪಡೆದ ವರ್ತಕರಿಗೆ ರಾಜ್ಯದ ಎಲ್ಲಿಯಾದರೂ ಖರೀದಿ ಮಾಡಲು ಅವಕಾಶವಿದೆ. ಅಧಿಸೂಚಿತ ಕೃಷಿ ಉತ್ಪನ್ನಗಳ ವಹಿವಾಟು ಮಾರುಕಟ್ಟೆ ಪ್ರಾಂಗಣಗಳಲ್ಲಿ ನಡೆಸಲು ಕಾಯ್ದೆಯಡಿ ಕಡ್ಡಾಯಗೊಳಿಸಿದೆ ಎಂದು ವಿವರಿಸಿದ್ದಾರೆ.
ಮಾರುಕಟ್ಟೆ ಪ್ರಾಂಗಣದಲ್ಲಿ ವಹಿವಾಟು ನಡೆಯುವುದರಿಂದ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಮಾರುಕಟ್ಟೆ ಪ್ರಾಂಗಣ ಹೊರಗಡೆ ವರ್ತಕರು ವಹಿವಾಟು ನಡೆಸಲು ಅವಕಾಶ ಇರುವುದಿಲ್ಲ. ಆದರೆ, ನೇರ ಖರೀದಿ ಕೇಂದ್ರ ಸ್ಥಾಪನೆಗೆ ಲೈಸನ್ಸ್ ಪಡೆದು ಮರುಕಟ್ಟೆ ಪ್ರಾಂಗಣದ ಹೊರಗಡೆ ರೈತರಿಂದ ನೇರವಾಗಿ ಖರೀದಿ ಮಡಲು ಅವಕಾಶವಿರುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಮಾರುಕಟ್ಟೆ ಶುಲ್ಕ ಆಕರಣೆಯನ್ನು ಏಕ ಹಂತದಲ್ಲಿ ಮಾಡಲು ಕ್ರಮ ವಹಿಸಿದೆ. ವ್ಯಾಪಾರ ವಹಿವಾಟಿನ ವಿವರಗಳನ್ನು ಸಲ್ಲಿಸುವ ಬಗ್ಗೆ ಸಮಿತಿಯ ಉಪ ನಿಯಮಗಳಲ್ಲಿ ನಮೂನೆ, ದಾಖಲೆ ನಿಗದಿಪಡಿಸಿದ್ದು ಪೇಟೆ ಕಾರ್ಯಕರ್ತರು ಅದನ್ನು ಅನುಸರಿಸುತ್ತಿದ್ದಾರೆ. ಎಪಿಎಂಸಿ ವ್ಯವಹಾರ (ಮಾರುಕಟ್ಟೆ ಪ್ರಾಂಗಣಗಳಲ್ಲಿ ಆಸ್ತಿ ಹಂಚಿಕೆ ನಿಯಂತ್ರಣ) ನಿಯಮಾವಳಿ 2004ರಡಿಯಲ್ಲಿ ಲೈಸನ್ಸ್ ಪಡೆದ ಪೇಟೆ ಕಾರ್ಯಕರ್ತರಿಗೆ ನಿವೇಶನ, ಅಂಗಡಿ, ಗೋದಾಮು ಹಂಚಿಕೆಗೆ ಅವಕಾಶವಿರುತ್ತದೆ. 10 ವರ್ಷಗಳ ಅವಧಿಗೆ ಲೀಸ್ ಕಂ ಸೇಲ್ ಆಧಾರದ ಮೇಲೆ ಹಂಚಿಕೆ ಮಾಡಿ ನಂತರದಲ್ಲಿ ಷರತ್ತುಗಳು ಪೂರೈಕೆಯಾಗಿದ್ದಲ್ಲಿ ಷರತ್ತುಬದ್ಧ ಖರೀದಿ ಪತ್ರ ಮಾಡಿಕೊಡಲಾಗುತ್ತದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ಮಾಡಿ ಸುಧಾರಣೆ ತರುವ ಉದ್ದೇಶ ಸರ್ಕಾರಕ್ಕಿದೆ. ಈ ಸಂಬಂಧ ರಚಿಸಿದ್ದ ಸಮಿತಿ ನೀಡಿರುವ ವರದಿಯನ್ನು ಸರ್ಕಾರ ಅಂಗೀಕರಿಸಿ ಅದರ ಆಧಾರದ ಮೇಲೆ ಕರ್ನಾಟಕ ಕೃಷಿ ಮಾರಾಟ ನೀತಿ 2013ನ್ನು ರಚಿಸಿದೆ. (ಆದೇಶ ಸಂ. ಸಇ-243-ಎಆರ್ಇ 13 ದಿನಾಂಕ 4-9-2013ರಲ್ಲಿ ಪ್ರಕಟಿಸಲಾಗಿದೆ) ಇದಕ್ಕೆ ಅನುಗುಣವಾಗಿ ಎಪಿಎಂಸಿ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆಗೆ ತಿದ್ದುಪಡಿ ಮಾಡಿದ್ದು ಪೂರಕವಾಗಿ ನಿಯಮಗಳನ್ನು ಜಾರಿಗೊಳಿಸಿದೆ ಎಂದು ವಿವರಿಸಿದ್ದಾರೆ.