ದ್ವಿಚಕ್ರ ವಾಹನ ಕದಿಯುತ್ತಿದ್ದ ಹೊಳೆನರಸೀಪುರದ ಯುವಕ ಕೆ.ಆರ್.ಪೇಟೆಯಲ್ಲಿ ಬಂಧನ
ಕೆ.ಆರ್.ಪೇಟೆ: ನಕಲಿ ಕೀ ಬಳಸಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಮೂವರು ಬೈಕ್ ಕಳ್ಳರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಕಿಕ್ಕೇರಿ ಗ್ರಾಮದ ಉಮೇಶ್ ಪುತ್ರ ಕೆ.ಯು.ಬೆನಕ (19) ಮತ್ತು ಹೊಳೆನರಸೀಪುರ ಸುರೇಶ್ ಪುತ್ರ ಹೆಚ್.ಎಸ್.ಸಂತೋಷ್ ಕುಮಾರ್ (20) ಮತ್ತು ಹಾಸನದ ಕೇಶವ ಪ್ರಸಾದ್ ಪುತ್ರ ರಾಜು ಬಂಧಿತರು. ಬುಧವಾರ ರಾತ್ರಿ ಗ್ರಾಮಾಂತರ ಠಾಣೆಯ ಪಿಎಸ್ಐ ಡಿ.ಪಿ.ಧನರಾಜ್ ಹಾಗೂ ಸಿಬ್ಬಂದಿಗಳಾದ ಪ್ರಶಾಂತಕುಮಾರ್, ಕೃಷ್ಣೇಗೌಡ ಹಾಗೂ ಮಹದೇವಯ್ಯ ಅವರ ತಂಡ ಹರಿಹರಪುರ ಗ್ರಾಮದ ಸರ್ಕಲ್ನಲ್ಲಿ ಗಸ್ತಿನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ಆ ವೇಳೆ ಅಕ್ಕಿಹೆಬ್ಬಾಳು ಕಡೆಯಿಂದ ಹೀರೋಹೊಂಡಾ ಬೈಕ್ನಲ್ಲಿ ಬರುತ್ತಿದ್ದ ಆರೋಪಿಗಳು ಪೊಲೀಸರನ್ನು ಕಂಡು ಅನುಮಾನಸ್ಪದ ರೀತಿಯಲ್ಲಿ ವೇಗವಾಗಿ ಪರಾರಿಯಾಗಲು ಪ್ರಯತ್ನಿಸಿದರು. ಪೊಲೀಸರು ಅವರನ್ನು ತಡೆದು ತಪಾಸಣೆ ನಡೆಸಿ ವಿಚಾರಣೆ ನಡೆಸಿದಾಗ ಆರೋಪಿಗಳು ಹಾಸನದ ಹೊಸ ಬಸ್ ನಿಲ್ದಾಣದಲ್ಲಿ 4, ಹೊಳೆನರಸೀಪುರ ಬಸ್ ನಿಲ್ದಾಣದಲ್ಲಿ 1 ಹಾಗೂ ಚನ್ನರಾಯಪಟ್ಟಣ ಬಸ್ ನಿಲ್ದಾಣದಲ್ಲಿ 1 ಬೈಕ್ ಸೇರಿ ಸುಮಾರು 2 ಲಕ್ಷ ಬೆಲೆ ಬಾಳುವ 6 ಹೀರೋ ಹೊಂಡಾ ಬೈಕ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.