ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ಅರಕಲಗೂಡು: ತಾಲೂಕಿನಲ್ಲಿ ಬಗುರ್ ಹುಕುಂ ಸಾಗುವಳಿ ಮಾಡುತ್ತಿರುವವರಿಗೆ ಸಾಗುವಳಿ ಪತ್ರ ನೀಡಬೇಕು ಹಾಗೂ ಉತ್ತರ ಪ್ರದೇಶದಲ್ಲಿ ದಲಿತ ಹೆಣ್ಣು ಮಗಳ ಮೇಲೆ ಅತ್ಯಾಚಾರವೆಸಗಿದ ಕಿಡಿಗೇಡಿಗಳನ್ನು ದೇಶದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಶುಕ್ರವಾರ ಬೆಳಗ್ಗೆ ತಾಲೂಕು ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ದಲಿತರು, ಬಡವರು ಬೀದಿಯಲ್ಲಿ ತಲೆ ಎತ್ತಿ ತಿರುಗಾಡಲು ಸ್ವಾತಂತ್ರ್ಯವಿಲ್ಲದಂತಾಗಿದೆ. ದಲಿತ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಗಮನಹರಿಸಬೇಕು. ಇತ್ತೀಚೆಗೆ ಅತ್ಯಾಚಾರವೆಸಗಿದ ತಪ್ಪಿತಸ್ಥರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ತಾಲೂಕಿನಲ್ಲಿ ಬಗುರ್ ಹುಕುಂ ಮತ್ತು ಕುಳುವಾಡಿಕೆ ಇನಾಮು ಜಾಗವನ್ನು ಸುಮಾರು 70-80 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಅವರಿಗೆ ಸಾಗುವಳಿ ಪತ್ರ ವಿತರಿಸಬೇಕು. ವಿಧವಾ ವೇತನ, ವೃದ್ಧಾಪ್ಯ ವೇತನ, ಜಾತಿ, ಆದಾಯ ಮತ್ತು ವಾಸಸ್ಥಳ ದೃಢೀಕರಣ ಪತ್ರಗಳು ಸರಿಯಾದ ಸಮಯಕ್ಕೆ ದೊರಕದೇ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಸದರಿ ಪತ್ರಗಳನ್ನು ಅರ್ಜಿ ದೊರೆತ 7 ದಿನಗಳೊಳಗೆ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಸಂಚಾಲಕ ಗಣೇಶ್ ವೆಲಾಪುರಿ, ತಾಲೂಕು ಸಂಚಾಲಕ ಕಾಂತರಾಜು, ತಾಲೂಕು ಸಂಘಟನಾ ಸಂಚಾಲಕ ವೀರಾಜ್ ಕೊಪ್ಪಲು, ಸಣ್ಣಸ್ವಾಮಿ, ಮೋಹನ್ ಕುಮಾರ್, ಎ.ಸಿ.ಕಿರಣ್ ಇದ್ದರು.