ಸಕಲೇಶಪುರ ಪ್ರಭಾರ ಅಧ್ಯಕ್ಷರಿಗೆ ಪ್ರಥಮ ಬಾರಿ ಬಜೆಟ್ ಮಂಡನೆ ಅವಕಾಶ
ಹತ್ತೇ ನಿಮಿಷಗಳಲ್ಲಿ 1.74 ಕೋಟಿ ಆಯವ್ಯಯ ಮಂಡಿಸಿದ ಮುಖೇಶ್
ಹಾಸನ: ಜಿಲ್ಲೆಯ ಸಕಲೇಶಪುರ ಪುರಸಭೆ ಗುರುವಾರ ಎರಡು ವಿಲಕ್ಷಣ, ವಿಚಿತ್ರ, ಅಚ್ಚರಿ ಘಟನೆಗಳಿಗೆ ಸಾಕ್ಷಿಯಾಯಿತು.
1. ಪ್ರಭಾರಿ ಅಧ್ಯಕ್ಷ ಮುಖೇಶ್ ಶೆಟ್ಟಿ ಅವರಿಗೆ ಬಜೆಟ್ ಮಂಡಿಸಲು ಅವಕಾಶ ಸಿಕ್ಕು ಕೇವಲ 10 ನಿಮಿಷಗಳಲ್ಲಿ 1.74 ಕೋಟಿ ಉಳಿತಾಯ ಬಜೆಟ್ ಮಂಡಿಸಿದರು.
2. ಪುರಸಭೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರಭಾರ ಅಧ್ಯಕ್ಷರೊಬ್ಬರಿಂದ ಬಜೆಟ್ ಮಂಡನೆಯಾಯಿತು.
ಕಳೆದ ಮೂರ್ನಾಲ್ಕು ತಿಂಗಳಿನಿಂದ ಪಟ್ಟಣದ ಪುರಸಭೆಯಲ್ಲಿ ನಡೆದ ಕೆಲವೊಂದು ರಾಜಕೀಯ ವಿದ್ಯಮಾನಗಳಿಂದ ಬಜೆಟ್ ಮಂಡನೆ ಆಗಿರಲಿಲ್ಲ. ಕಳೆದ ಮಾರ್ಚ್ 5ರಂದು ಹಿಂದಿನ ಅಧ್ಯಕ್ಷ ಸತೀಶ್ ಅವರು ಕರೆದ ಬಜೆಟ್ ಸಭೆಗೆ ಆಡಳಿತರೂಢ ಜೆಡಿಎಸ್ ಸದಸ್ಯರ ಜೊತೆಗೆ ವಿರೋಧ ಪಕ್ಷ ಕಾಂಗ್ರೆಸ್ ಸದಸ್ಯರು ಹಾಗೂ ಪಕ್ಷೇತರ ಸದಸ್ಯರು ಸಭೆಗೆ ಗೈರು ಹಾಜರಾಗಿದ್ದರಿಂದ ಬಜೆಟ್ ಮಂಡನೆ ಮಾಡಲು ಸತೀಶ್ ಅವರಿಗೆ ಅವಕಾಶ ಸಿಕ್ಕಿರಲಿಲ್ಲ.
ನಂತರ ಇತ್ತೀಚೆಗೆ ಬದಲಾದ ರಾಜಕೀಯ ವಿದ್ಯಮಾನದಲ್ಲಿ ಮಾಜಿ ಅಧ್ಯಕ್ಷ ಸತೀಶ್ ಅವರ ವಿರುದ್ಧ ನಡೆದ ಅವಿಶ್ವಾಸ ನಿರ್ಣಯ ಸಭೆಯಲ್ಲಿ ಬಹುತೇಕ ಸದಸ್ಯರು ಅವಿಶ್ವಾಸ ನಿರ್ಣಯದ ಪರ ಬೆಂಬಲ ವ್ಯಕ್ತಪಡಿಸಿದ್ದರಿಂದ ಸತೀಶ್ ಅನಿವಾರ್ಯವಾಗಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಪರಿಸ್ಥಿತಿ ಉಂಟಾಗಿದ್ದರಿಂದ ಪ್ರಭಾರ ಅಧ್ಯಕ್ಷರಾಗಿ ಉಪಾಧ್ಯಕ್ಷ ಮುಖೇಶ್ ಶೆಟ್ಟಿ ಆಯ್ಕೆಯಾಗಿದ್ದರು.
ಈ ಬಾರಿಯ ಬಜೆಟ್ನಲ್ಲಿ ಆರಂಭಿಕ ಶಿಲ್ಕು (1,84,21,000), 2014-15ನೇ ಸಾಲಿನ ನಿರೀಕ್ಷಿತ ಜಮಾ (13,74,00,000), ಒಟ್ಟು ನಿರೀಕ್ಷಿತ ಜಮಾ (15,58,81000), 2013-14ನೇ ಸಾಲಿನ ನಿರೀಕ್ಷಿತ ಖರ್ಚು 14,57,07,000 ಹಾಗೂ ನಿರೀಕ್ಷಿತ ಉಳಿತಾಯ 1,01,74,000 ಗಳಾಗಿದೆ.
ಸಭೆಗೆ ಪುರಸಭೆಯ ನಿಕಟ ಪೂರ್ವ ಅಧ್ಯಕ್ಷ ಸತೀಶ್ ಗೈರು ಹಾಜರಾದರೆ ಕಾಂಗ್ರೆಸ್ನ ನೂತನ ನಾಮನಿರ್ದೇಶಿತ ಸದಸ್ಯರು ಸೇರಿದಂತೆ ಎಲ್ಲ ಪುರಸಭಾ ಸದಸ್ಯರು, ಪುರಸಭೆ ಮುಖ್ಯಾಧಿಕಾರಿ ನಾಗಶೆಟ್ಟಿ ಸೇರಿದಂತೆ ಅಧಿಕಾರಿಗಳು ಇದ್ದರು.