ಆಲೂಗಡ್ಡೆ ಬೆಳೆಗೆ ಔಷಧೋಪಚಾರ: ಸಲಹೆ
ಹಾಸನ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದು ತುಂತುರು ಮಳೆ ಇರುವುದರಿಂದ ಹಾಗೂ ಆಲೂಗೆಡ್ಡೆ ಬೆಳೆಯು ಅಂದಾಜು 45 ದಿನಗಳ ಬೆಳೆಯಾಗಿರುವುದರಿಂದ ಈ ಹಂತದಲ್ಲಿ ಅಂಗಮಾರಿ ರೋಗ ಬರುವ ಸಾಧ್ಯತೆಗಳು ಇರುತ್ತವೆ. ಈಗಾಗಲೇ ಹಲವು ರೈತರು ಮುಂಜಾಗ್ರತಾ ಕ್ರಮವಾಗಿ ರೈತರು ಶಿಲೀಂಧ್ರನಾಶಕಗಳನ್ನು ಆಲೂಗಡ್ಡೆ ಬೆಳೆಗೆ ಸಿಂಪಡನೆ ಮಾಡುವುದು ಅಗತ್ಯವಾಗಿದೆ.
ಶೇ.50 ರ ಸಹಾಯಧನ: ತೋಟಗಾರಿಕೆ ಇಲಾಖೆ ವತಿಯಿಂದ ಆಲೂಗೆಡ್ಡೆ ವಿಶೇಷ ಪ್ಯಾಕೇಜ್ ಯೋಜನೆಯಡಿ ಆಲೂಗೆಡ್ಡೆ ಬೆಳೆಗಾರರಿಗೆ ವಿವಿಧ ಸಸ್ಯ ಸಂರಕ್ಷಣಾ ಔಷಧಿಗಳನ್ನು ಶೇ.50 ರ ಸಹಾಯಧನದಲ್ಲಿ ಆಯಾ ತಾಲೂಕಿನಲ್ಲೇ ವಿತರಿಸಲಾಗುತ್ತಿದ್ದು, ಈಗಾಗಲೇ ಈ ಸೌಲಭ್ಯ ಪಡೆದುಕೊಳ್ಳದ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಪಂಚಾಯ್ತಿ ತೋಟಗಾರಿಕೆ ಉಪನಿರ್ದೇಶಕರು ಕೋರಿದ್ದಾರೆ.