'ಆಶ್ರಯ'ಕ್ಕಾಗಿ ತಾಯಿಯನ್ನೇ ಶೌಚಾಲಯದಲ್ಲಿ ಬಂಧಿಸಿಟ್ಟ
ಹಾಸನ: ಆಶ್ರಯ ಮನೆಯನ್ನ ತನ್ನ ಹೆಸರಿಗೆ ಬರೆಯಲಿಲ್ಲ ಎಂಬ ದುರಾಶೆಯಿಂದ ಮಗನೇ ತನ್ನ ತಾಯಿಯನ್ನು ಐದು ದಿನಗಳಿಂದ ಶೌಚಾಲಯದಲ್ಲಿ ಕೂಡಿ ಹಾಕಿದ ಹೃದಯವಿದ್ರಾವಕ ಘಟನೆ ಚನ್ನರಾಯಪಟ್ಟಣ ತಾಲೂಕಿನ ಸುಗ್ಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜಯಮ್ಮ (67) ಶೌಚಾಲಯದಲ್ಲಿ ಬಂಧಿಯಾಗಿದ್ದ ವಯೋವೃದ್ಧೆ.
ಘಟನೆ ವಿವರ: ಜಯಮ್ಮಳ ಎರಡನೇ ಮಗ ರಮೇಶ್ ಎಂಬಾತನೇ ಹೆತ್ತ ತಾಯಿಯನ್ನ ಶೌಚಾಲಯದಲ್ಲಿ ಕೂಡಿಹಾಕಿದ ಪುತ್ರ. ಊಟವಿಲ್ಲದೇ ಆಕೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಸದ್ಯ ರಮೇಶ್ ಸುಗ್ಗೇನಹಳ್ಳಿಯಿಂದ ಪರಾರಿಯಾಗಿದ್ದಾನೆ.
ಮಗಳು ಪದ್ಮ ಸರ್ಕಾರದಿಂದ ಪಡೆದಿದ್ದ ಆಶ್ರಯ ಮನೆಯನ್ನು ತನ್ನ ತಾಯಿಯ ಹೆಸರಿನಲ್ಲಿ ಮಾಡಿಸಿದ್ದಳು. ತಾಯಿಗೆ ವಯಸ್ಸಾಗಿದ್ದರಿಂದ ಆಕೆ ಮಗಳ ಮನೆಯಲ್ಲಿಯೇ ವಾಸವಾಗಿದ್ದಳು. ಆದರೆ ಈ ಮನೆಯನ್ನು ರಮೇಶ್ ತನ್ನ ಹೆಸರಿಗೆ ಮಾಡಿಕೊಂಡುವಂತೆ ತಾಯಿಯನ್ನ ಪೀಡಿಸಿದ್ದ.
ಶೌಚಾಲಯದಲ್ಲಿ ಬಂಧನ: ಹಲವಾರು ಬಾರಿ ಕೇಳಿದರೂ ಮನೆಯನ್ನು ತನ್ನ ಹೆಸರಿಗೆ ಮಾಡಿಕೊಡಲಿಲ್ಲವೆಂದು ಕೊಪಗೊಂಡ ರಮೇಶ್, ತನ್ನ ತಾಯಿಯನ್ನು ಕಳೆದ ಐದು ದಿನಗಳಿಂದ ಮನೆಯ ಶೌಚಾಲಯದಲ್ಲಿ ಕೂಡಿಹಾಕಿದಾದನೆ. ಮನೆಗೆ ಬೀಗ ಹಾಕಿರುವುದರಿಂದ ಅಕ್ಕಪಕ್ಕದ ಮನೆಯವರು ಆಕೆಗೆ ಊಟವನ್ನು ಕೊಡಲು ಸಾಧ್ಯವಾಗುತ್ತಿಲ್ಲ.
ಪದ್ಮಳ ಗಂಡ 15 ವರ್ಷಗಳ ಹಿಂದೆಯ ಆಕಸ್ಮಿಕವಾಗಿ ಮರಣ ಹೊಂದಿದ್ದ. ಹಾಗಾಗಿ ಆಕೆ ತವರು ಮನೆಯಲ್ಲಿಯೇ ವಾಸವಾಗಿದ್ದಳು. ತನಗೆ ಬಂದಿದ್ದ ಆಶ್ರಯ ಮನೆಯನ್ನ ತನ್ನ ತಾಯಿಯ ಹೆಸರಿಗೆ ಮಾಡಿಸಿದ್ದು. ಜೊತೆಗೆ ಒಂದಿಷ್ಟು ಬ್ಯಾಂಕ್ನಿಂದ ನೆರವು ಪಡೆದು ಮನೆಯನ್ನ ಸ್ಪಲ್ಪ ದೊಡ್ಡದಾಗಿ ಕಟ್ಟಿಸಿದ್ದಾಳೆ.
ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ: ಜಯಮ್ಮಳ ಮಗಳಾದ ಪದ್ಮ ಮಾತನಾಡಿ, ಮನೆಯನ್ನು ತನ್ನ ಹೆಸರಿಗೆ ಮಾಡಿಸಿಕೊಡುವಂತೆ ರಮೇಶ ನಾಲ್ಕು ವರ್ಷಗಳಿಂದ ಪೀಡಿಸುತ್ತಿದ್ದ. ಕಳೆದ ಒಂದುವರೆ ತಿಂಗಳಿಂದ ಇವರಿಬ್ಬರ ಮಧ್ಯೆ ಜಗಳವೂ ಆಗಿತ್ತು. ಮಧ್ಯ ಬಂದ ನನ್ನನ್ನೂ ಕೂಡಾ ಅಶ್ಲೀಲ ಪದಗಳಿಂದ ಬೈದು ಹಲ್ಲೆ ಮಾಡಿದ್ದಾನೆ. ನಂತರ ಕಳೆದ ಮಂಗಳವಾರದಿಂದ ನಮ್ಮ ತಾಯಿಯನ್ನ ಶೌಚಾಲಯದಲ್ಲಿ ಕೂಡಿಹಾಕಿದ್ದಾನೆ. ಪದ್ಮ ಸಾಕಷ್ಟುಬಾರಿ ಶ್ರವಣಬೆಳಗೊಳ ಠಾಣೆಗೆ ತಿಳಿಸಿದ್ದರೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ನೋವನ್ನು ತೋಡಿಕೊಂಡರು. ಘಟನೆಗೆ ಸಂಬಂಧಿಸಿದಂತೆ ಪದ್ಮ ಪೊಲೀಸರಿಗೆ ದೂರು ನೀಡಿದ್ದಾರೆ