ಎವಿಕೆ ಕಾಲೇಜಿಗೆ ಕೊಳವೆಬಾವಿ ಕೊಡುಗೆ
ಹಾಸನ: ನಗರದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನಲ್ಲಿ ನೀರಿನ ಅಭಾವ ಇದ್ದುದನ್ನು ಮನಗಂಡು ವಿದ್ಯಾರ್ಥಿನಿಯರ ಉಪಯೋಗಕ್ಕಾಗಿ ಜ್ಯೋತಿ ಗುರುದೇವ್ ಅವರು ಸ್ವಯಂ ಆಸಕ್ತಿಯಿಂದ ಉದಾರವಾಗಿ ಕೊಡುಗೆ ನೀಡಿದ್ದಾರೆ. ಅವರು ಕೊಳವೆ ಬಾವಿಯನ್ನು ಕೊರೆಸಿ ಅದಕ್ಕೆ ಬೇಕಾದ ಪಂಪ್ ಅನ್ನು ಅಳವಡಿಸಿ ತಾವೇ ಚಾಲನೆ ನೀಡುವ ಮೂಲಕ ಕಾಲೇಜಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಬಿ.ಆರ್.ಗುರುದೇವ್, ಆಡಳಿತ ಮಂಡಳಿ ಸದಸ್ಯರಾದ ಹೆಚ್.ಎ.ಗೋವಿಂದರಾಜಶೆಟ್ಟಿ, ಸಿ.ಎಸ್.ಶ್ರೀಕಂಠ, ಕೆ.ಎಂ.ಶಿವಣ್ಣ ಖಜಾಂಚಿ ಆರ್.ಶೇಷಗಿರಿ ಇದ್ದರು ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಜೆ.ಶೈಲಜ ಕುಮಾರಿ ಮತ್ತು ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರು, ಬೋಧಕ, ಬೋಧಕೇತರ ವರ್ಗದವರು ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರು ಇದ್ದರು.
ನಾರಾಯಣಪುರಕ್ಕೆ ನೀರು: ಸಚಿವ ಪಾಟೀಲ್
ಹಾಸನ: ಬೇಲೂರು ತಾಲೂಕಿನ ಯಗಚಿ ಜಲಾಶಯದ ಹಿನ್ನೀರಿನ ಆಸುಪಾಸಿನ ನಾರಾಯಣಪುರ ಗ್ರಾಮದಲ್ಲಿ ಸಮರ್ಪಕ ಕುಡಿಯುವ ನೀರಿನ ಪೂರೈಕೆಗಾಗಿ 2014-15ನೇ ಸಾಲಿನ ಕ್ರಿಯಾ ಯೋಜನೆಯಡಿ .3.35ಲಕ್ಷ ಅಂದಾಜಿನಲ್ಲಿ ಕೊಳವೆ ನೀರು ಸರಬರಾಜು ಪುನಶ್ಚೇತನ ಕಾಮಗಾರಿ ಅಳವಡಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವರಾದ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ. ವಿಧಾನಪರಿಷತ್ನಲ್ಲಿ ಸದಸ್ಯ ಪಟೇಲ್ ಶಿವರಾಂ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಾರಾಯಣಪುರ ಗ್ರಾಮದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಪೂರೈಕೆಯಿಲ್ಲದಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು ಅದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. 2009-10ನೇ ಸಾಲಿನ ಸುವರ್ಣ ಗ್ರಾಮೋದಯ ಯೋಜನೆಯಡಿ ನಾರಾಯಣಪುರ ಗ್ರಾಮ ಪಂಚಾಯಿತಿಯ ನಾರಾಯಣಪುರ ಗ್ರಾಮದಲ್ಲಿ ರಸ್ತೆ, ಚರಂಡಿ ಹಾಗೂ ಕಟ್ಟಡಗಳ ನಿರ್ಮಾಣಕ್ಕೆ 23.93 ಲಕ್ಷ ರು. ಮಂಜೂರಾಗಿದೆ ಎಂದು ಸಚಿವರು ಉತ್ತರಿಸಿದರು.