ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಹಿಳೆಯ ಚಿನ್ನಾಭರಣ ದರೋಡೆ ಯತ್ನ: ಐವರ ಬಂಧನ

Rashmi Kasaragodu
Updated On : 13 Jul 2014, 12:31 pm

ಹೊಳೆನರಸೀಪುರ: ಬೆಟ್ಟದ ಮೇಲಿನ ದೇವಾಲಯಕ್ಕೆ ತೆರಳಿದ್ದ ಮಹಿಳೆಯೊಬ್ಬರನ್ನು ಅಡ್ಡಗಟ್ಟಿ ಚಿನ್ನಾಭರಣ ದರೋಡೆಗೆ ಯತ್ನಿಸಿರುವ ಐವರು ಯುವಕರನ್ನು ಗ್ರಾಮಸ್ಥರು ಹಿಡಿದು ಇಲ್ಲಿನ ನಗರ ಠಾಣೆಗೆ ಒಪ್ಪಿಸಿದ್ದು, ಉಳಿದ ಮೂವರು ಆರೋಪಿಗಳು ಪರಾರಿಯಾದ ಘಟನೆ ತಾಲೂಕಿನ ಹಳೇಕೋಟೆ ರಂಗನಾಥಸ್ವಾಮಿ ದೇವಾಲಯದ ಬಳಿ ಶನಿವಾರ ಸಂಜೆ ನಡೆದಿದೆ.
 ಹಳೇಕೋಟೆ ಹೋಬಳಿಗೆ ಸೇರಿದ ಸಬ್ಬನಹಳ್ಳಿ ಗ್ರಾಮದ ಮಹಿಳೆ ಮಣಿ ಎಂಬಾಕೆಯು ತಮ್ಮ  ಸಂಬಂಧಿಯಾದ ಶೇಖರ ಎಂಬವರೊಂದಿಗೆ  ಹಳೇಕೋಟೆ ಬಳಿಯಲ್ಲಿನ ಬೆಟ್ಟದ ರಂಗನಾಥಸ್ವಾಮಿ ದೇವಾಲಯಕ್ಕೆ ತೆರಳಿದ್ದ ಸಂದರ್ಭದಲ್ಲಿ, ಎಂಟು ಯುವಕರಿದ್ದ ತಂಡ, ಇವರಿಬ್ಬರನ್ನೂ ಬೆದರಿಸಿದೆ. ಬಳಿಕ  ಮಹಿಳೆಯನ್ನು ಚಿನ್ನಾಭರಣ ನೀಡುವಂತೆ ಬೆದರಿಸಿದೆ. ಅಲ್ಲದೇ, ಆಕೆಯನ್ನು ಅಸಹ್ಯವಾಗಿ ಮೊಬೈಲ್ನಲ್ಲ ಚಿತ್ರೀಕರಿಸಲು ಮುಂದಾಗಿದೆ.
ಹಣಕ್ಕಾಗಿ ಹಿಂಬಾಲಿಸಿದರು: ತನ್ನ ಬಳಿಯಲ್ಲಿ ಹಣವಿಲ್ಲ, ಬೆಟ್ಟದ ಕೆಳಗಿನ ಹಳೇಕೋಟೆ ಬಳಿಯಲ್ಲಿನ ಪರಿಚಯಸ್ಥರಲ್ಲಿ ಹಣ ಪಡೆದು ನೀಡುವುದಾಗಿ ಮಹಿಳೆ ಹೇಳಿದ್ದಾಳೆ. ಇದನ್ನು ನಂಬಿದ ಯುವಕರ ಗುಂಪು ಆಕೆಯೊಂದಿಗೆ ಬೆಟ್ಟದ ಕೆಳಗೆ ಇಳಿದಿದೆ.
 ಹಳೇಕೋಟೆಯಲ್ಲಿನ ಪ್ರಮುಖ ವ್ಯಕ್ತಿಯೊಬ್ಬರ ಬಳಿ ಮಹಿಳೆ ಬೆಟ್ಟದ ಮೇಲೆ ನಡೆದ ಘಟನೆಯನ್ನು ವಿವರಿಸುತ್ತಿದ್ದಾಗ ದರೋಡೆಕೋರರ ಗುಂಪು ಪರಾರಿಯಾಗಲು ಯತ್ನಿಸಿದೆ. ಆಗ ಸ್ಥಳದಲ್ಲೇ ಇದ್ದ ಗ್ರಾಮಸ್ಥರು ದರೋಡೆಕೋರರ ಗುಂಪಿನ  ಹೇಮಂತ, ಅಭಿಷೇಕ್, ಹರೀಶ, ಯಶವಂತ್, ದಿಲೀಪ ಎಂಬುರನ್ನು ಹಿಡಿದಿದು ಹೊಳೆನರಸೀಪುರದ ನಗರ ಠಾಣೆಗೆ ವಿಷಯ ತಿಳಿಸಿದ್ದಾರೆ.
ಮೂವರು ಪರಾರಿ: ಪೊಲೀಸರು ಆಗಮಿಸುವ ಮುನ್ನ  ಮೂವರು ಪ್ರಮುಖ ಆರೋಪಿಗಳಾದ ಮಹೇಶ, ಸಚಿನ್ ಹಾಗೂ ಅನಿಲ್ ಅವರುಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಉಳಿದ ಐವರನ್ನು  ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
 ಪ್ರಕರಣದಲ್ಲಿ ಭಾಗಿಯಾಗಿರುವ ಎಂಟು ಯುವಕರ ತಂಡವು ಹಳೇಕೋಟೆಯ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಯುವಕರ ಗುಂಪಾಗಿದ್ದು, ಇವರಲ್ಲಿ ಕೆಲವರು ಕಾಲೇಜು ವಿದ್ಯಾರ್ಥಿಗಳೆನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement