ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಹಿಳೆಯರು ಟಿವಿಯಿಂದ ದೂರವಿರಲಿ

Rashmi Kasaragodu
Updated On : 13 Jul 2014, 12:31 pm

ಹಾಸನ: ಮಹಿಳೆಯರು ಮೊದಲು ತಮ್ಮ ಮನೆಯಲ್ಲಿ ಸಾಕಿಕೊಂಡಿರುವ ಪಿಶಾಚಿ ಟಿವಿಯಿಂದ ದೂರವಿರಬೇಕು ಎಂದು ಸಾಹಿತಿ ರೂಪಹಾಸನ ಸಲಹೆ ನೀಡಿದರು.
ನಗರದ ರಾಮಕೃಷ್ಣ ವಿದ್ಯಾಲಯ ಹೋಲಿ ಮದರ್ ಶಾಲೆಯ ಸಭಾಂಗಣದಲ್ಲಿ ಪತಂಜಲಿ ಯೋಗ ಶಿಕ್ಷಣ ಕೇಂದ್ರದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಉಚಿತ ಯೋಗಾಸನ ಶಿಬಿರದಲ್ಲಿ ಮಾತನಾಡಿ, ನಮ್ಮೆಲ್ಲಾ ಸಮಯವನ್ನು ನುಂಗಿಬಿಡುವ ಹಾಗೂ ಮನಸ್ಸನ್ನು ಆಕ್ರಮಿಸುವ ಧಾರಾವಾಹಿಗಳಿಂದ ಬಿಡಿಸಿಕೊಳ್ಳಬೇಕು ಎಂದರು.
ಟೈಂ ಮ್ಯಾನೇಜ್ಮೆಂಟ್: ಆಧುನಿಕ ಕಾಲಘಟ್ಟದಲ್ಲಿ ಮಹಿಳೆಯರಿಗೆ ಧ್ಯಾನ, ಯೋಗ, ಪ್ರಾಣಾಯಾಮಗಳು ಅಗತ್ಯವಾಗಿವೆ. ಇದರಿಂದ ದೇಹ ಮತ್ತು ಮನಸ್ಸಿನ ಸಮತೋಲನ ಸಾಧಿಸಲು ಸಾಧ್ಯ ಎಂದರು. ಮನಸ್ಸು ಅತ್ಯಂತ ಮೈಗಳ್ಳತನದ್ದಾಗಿದ್ದು, ಅದನ್ನು ನಾವು ಹೇಳಿದ್ದನ್ನು ಕೇಳುವಂತೆ ಪಳಗಿಸಿಕೊಳ್ಳಬೇಕು. ಮಹಿಳೆಯರು ಸಮಯವನ್ನು ಮ್ಯಾನೇಜ್  ಮಾಡುವುದನ್ನು ಮೊದಲು ರೂಢಿಸಿಕೊಳ್ಳಬೇಕು. ಇದರಿಂದ ಸಮಸ್ಯೆಗಳು ಕಡಿಮೆಯಾಗುತ್ತದೆ. ಧಾವಂತ ಇಲ್ಲವಾಗಿ ಮನಸ್ಸು ಟೆನ್ಷನ್(ಉದ್ವೇಗ) ಮುಕ್ತವಾಗುತ್ತದೆ ಎಂದು ತಿಳಿ ಹೇಳಿದರು.
ಆರೋಗ್ಯಕ್ಕೆ ಸಮಯವಿರಲಿ: ಪತ್ರಕರ್ತೆ ಲೀಲಾವತಿ ಶಿಬಿರ ಉದ್ಘಾಟಿಸಿ, ಗೃಹಕೃತ್ಯದ ಒತ್ತಡದ ನಡುವೆಯೂ ಮಹಿಳೆಯರು ತಮಗಾಗಿ ಕನಿಷ್ಟ ದಿನದಲ್ಲಿ ಒಂದು ಗಂಟೆಯನ್ನಾದರೂ ಮೀಸಲಿಡುವಂತೆ ಸಲಹೆ ನೀಡಿದರು..
ಪ್ರಾತ್ಯಕ್ಷಿಕೆ: ಯೋಗ ಶಿಕ್ಷಕಿ ಕುಮುದಅಣ್ಣಯ್ಯ ಮಾತನಾಡಿ, ಯೋಗಾಸನಗಳ ಮೂಲಕ ರೋಗಗಳನ್ನು ನಿಯಂತ್ರಿಸುವ, ಮನಸ್ಸಿನ ಸ್ವಾಸ್ಥ್ಯ ಕಾಪಾಡಿಕೊಳ್ಳುವ ಬಗ್ಗೆ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ರಾಮಕೃಷ್ಣ ವಿದ್ಯಾಲಯದ ಪ್ರಾಂಶುಪಾಲ ಸಿ.ಎಸ್. ಕೃಷ್ಣಸ್ವಾಮಿ ಮಾತನಾಡಿ, ಮಾನಸಿಕ ಒತ್ತಡ ಹೆಣ್ಣಿಗೆ ಜಾಸ್ತಿ. ನನ್ನ ಅನುಭವದಲ್ಲಿ ಗಂಡಸರು ಸ್ವಾರ್ಥಿಗಳು. ಯೋಗ ಮತ್ತಿತರ ಕಾರ್ಯಗಳಿಗಾಗಿ ಹೆಣ್ಣು ಮನೆಯಿಂದ ಹೊರ ಬಂದಾಗ ಒತ್ತಡ ಕಡಿಮೆಯಾಗುತ್ತದೆ ಎಂದು ಹೇಳಿದರು. ಆಕಾಂಕ್ಷಾ ಪ್ರಾರ್ಥಿಸಿದರು. ಆಶಾ ಸ್ವಾಗತಿಸಿದರು. ಸುಮ ನಿರೂಪಿಸಿದರು. ಸರಳ ದಿನೇಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement