ಸಂಘಟನೆ ಹೆಸರಲ್ಲಿ ಶೋಷಣೆ ಸಲ್ಲ
ಕ.ಪ್ರ.ವಾರ್ತೆ , ಅರಸೀಕೆರೆ , ಜು.15
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಮಾಯಕ ಮುಗ್ದ ಜನರನ್ನು ಸಮಾಜದ ಕೆಲವು ಮುಖಂಡರೇ ರಾಜ್ಯ ಸಂಘಟನೆ ಹೆಸರಿನಲ್ಲಿ ಶೋಷಣೆ ಮಾಡುತ್ತಿದ್ದಾರೆ. ಇದು ಅತ್ಯಂತ ಅಘಾತಕಾರಿ. ಅಂತಹ ವ್ಯಕ್ತಿಗಳ ಮೇಲೆ ನಿರ್ದಿಷ್ಟವಾದ ಲಿಖಿತ ದೂರುಗಳನ್ನು ಸಲ್ಲಿಸಿದರೆ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳುವುದಾಗಿ ಡಿವೈಎಸ್ಪಿವಿ.ಜೆ. ಸಜೀತ್ ಭರವಸೆ ನೀಡಿದರು.
ಪಟ್ಟಣದ ಡಿವೈಎಸ್ಪಿ ಕಚೇರಿ ಆವರಣದಲ್ಲಿ ಕರೆಯಲಾಗಿದ್ದ ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಂಘಟನೆಗಳ ಮುಖಂಡರ ಸಭೆ ಉದ್ದೇಶಿಸಿ, ದಲಿತ ಸಂಘಟನೆ ಹೆಸರಿನಲ್ಲಿ ಕೆಲವು ಮುಖಂಡರೇ ದಲಿತ ವರ್ಗದ ಜನರನ್ನು ಇನ್ನಿಲ್ಲದ ಆಸೆ ಆಮಿಷ ತೋರಿಸಿ ಅವರಿಂದ ಹಣವನ್ನು ಕಿತ್ತುಕೊಂಡು ಶೋಷಣೆ ಮಾಡುವುದು ಬೇಲಿಯೇ ಎದ್ದು ಹೋಲ ಮೇಯ್ದದಂತೆ ಎಂದು ವಿಷಾದಿಸಿದರು.
ಈ ನಿಟ್ಟಿನಲ್ಲಿ ಇಂದು ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿವಿಧ ಸಂಘಟನೆಗಳ ಮುಖಂಡರನ್ನು ಕರೆದು ಅಲ್ಲಿನ ಸಮಸ್ಯೆಗಳು ಮತ್ತು ಪರಿಹಾರ ಮಾರ್ಗಗಳ ಕುರಿತು ಗಂಭೀರವಾದ ಚರ್ಚೆ ನಡೆಸಲಾಗಿದೆ.ಅಲ್ಲದೆ ಪಟ್ಟಣದ ಹಾಸನ ರಸ್ತೆ ಬಡಾವಣೆಗಳಲ್ಲಿ ಪುರಸಭೆ ಅನುಮತಿ ಇಲ್ಲದೆ ಆಕ್ರಮವಾಗಿ ಕಸಾಯಿಖಾನೆಗಳನ್ನು ನಡೆಸುತ್ತಿರುವುದು. ಮೈಕ್ರೋ ಫೈನಾನ್ಸ್ಗಳು ಮಹಿಳೆಯರಿಂದ ಹೆಚ್ಚಿನ ಬಡ್ಡಿಯನ್ನು ಸಂಗ್ರಹಣೆ ಮಾಡುತ್ತಿರುವ ದೂರುಗಳು, ಗ್ರಾಮಾಂತರ ಪ್ರದೇಶಗಳಲ್ಲಿ ಆಕ್ರಮವಾಗಿ ಮದ್ಯ ಮಾರಾಟವನ್ನು ಮಾಡುತ್ತಿರುವ ವಿಷಯಗಳು ಕುರಿತು ಈ ಸಭೆಯಲ್ಲಿ ಅನೇಕ ಮುಖಂಡರು ಪ್ರಸ್ತಾಪಿಸಿರುವುದು ಸ್ವಾಗತಾರ್ಹ.
ಸುಳ್ಳು ಭರವಸೆ: ದಲಿತ ಸಂಘರ್ಷ ಸಮಿತಿ ಮುಖಂಡ ಜಿ. ರಾಮು ಮಾತನಾಡಿ ಅಮಾಯಕ, ಮುಗ್ದ ದಲಿತರನ್ನು ವಂಚಿಸಿ ಗಂಗಾಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿ ಕೊರೆಸಿಕೊಡುವುದಾಗಿ ಹೇಳಿ ರು. 30 ಸಾವಿರ ವಸೂಲಿ ಮಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾಗಿ ಜಾರಿಗೆ ತಂದಿರುವ ಹಲವು ಯೋಜನೆಗಳ ಸವಲತ್ತುಗಳನ್ನು ದಲಿತ ವರ್ಗದ ಜನರಿಗೆ ಕೊಡಿಸುವ ಸುಳ್ಳು ಭರವಸೆ ನೀಡುತ್ತಿದ್ದಾರೆ. ಕಡುಬಡವರಿಂದ ಹಗಲು ದರೋಡೆ ರಾಜ್ಯ ದಲಿತ ಸಂಘಟನೆಯ ಹೆಸರಿನಲ್ಲಿ ಮಾಡಲಾಗುತ್ತಿದೆ. ಇಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಟಿ ನಾನಾ ಸಮಸ್ಯೆಗಳ ಕುರಿತು ಮಾಹಿತಿ
ಪರಿಶಿಷ್ಟ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕ ಸಂಕೋಡನಹಳ್ಳಿ ಶಂಕರಪ್ಪ ಮತ್ತು ಮಂಜುನಾಥ್, ರಾಮಕೃಷ್ಣ ಪುರದ ಹನುಮಂತಯ್ಯ, ಎ.ಪಿ. ಚಂದ್ರಯ್ಯ, ಬಾಣಾವರ ವೆಂಕಟೇಶ್, ಮಾಡಾಳು ಮೂಡ್ಲಪ್ಪ, ಶಿವನ್ ರಾಜ್, ಜಾವಗಲ್ ಇಂದ್ರೇಶ್ ಹಾಗೂ ಇನ್ನಿತರರು ನಾನಾ ಸಮಸ್ಯೆಗಳ ಕುರಿತು ಸಭೆಯಲ್ಲಿ ಮಾಹಿತಿ ನೀಡಿದರು. ಗ್ರಾಮಾಂತರ ಪೊಲೀಸ್ ಠಾಣೆ ಆರಕ್ಷಕ ವೃತ್ತ ನಿರೀಕ್ಷಕ ಗಂಗಾಧರಪ್ಪ ಮಾತನಾಡಿ, ಸಮಾಜದಲ್ಲಿನ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಸಾರ್ವಜನಿಕರ ಸಹಕಾರ ಅತ್ಯಂತ ಮುಖ್ಯವಾಗಿದೆ ಎಂದರು. ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂರಕ್ಷಿಸಲು ತಮ್ಮೆಲ್ಲರ ಸಹಕಾರ ಬೇಕೆಂದು ಮನವಿ ಮಾಡಿದರು. ಸಭೆಯಲ್ಲಿ ನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಯನ್ ಗೌಡ, ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುನೀಲ್ ಕುಮಾರ್ ಬಾಣಾವರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಚ್.ಎನ್. ಬಾಲು ಇದ್ದರು.