ಶೆಟ್ಟಿಹಳ್ಳಿ ಗ್ರಾಪಂ ಕಚೇರಿಯಲ್ಲಿ ಅವ್ಯವಹಾರ ದೂರು: ಪರಿಶೀಲನೆ
ಹಾಸನ: ಶೆಟ್ಟಿಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಅವ್ಯವಹಾರ ನಡೆಸಲಾಗಿದೆ ಎಂಬ ಗ್ರಾಮಸ್ಥರು ನೀಡಿದ ದೂರಿನ ಹಿನ್ನೆಲೆಯಲ್ಲಿ ಬುಧವಾರ ಅಧಿಕಾರಿಗಳು ಗ್ರಾಪಂಗೆ ಭೇಟಿ ನೀಡಿ ಕೆಲ ದಾಖಲಾತಿಗಳನ್ನು ಪರಿಶೀಲಿಸಿದರು.
ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮ ಪಂಚಾಯ್ತಿ ಹಿಂದಿನ ಕಾರ್ಯದರ್ಶಿ ಕೆ.ಎನ್. ತಮ್ಮಣ್ಣಗೌಡ ಮತ್ತು ಬಿ ಲ್ ಕಲೆಕ್ಟರ್ ಸೋಮಶೇಖರ್ ಅವ್ಯವಹಾರ ಮಾಡಿದ್ದಾರೆ ಎಂದು ಗ್ರಾಮಸ್ಥರು, ಲೋಕಾಯುಕ್ತ ಅಧಿಕಾರಿಗೆ ಪತ್ರ ಬರೆದು ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಆದೇಶ ಮಾಡಿದ್ದರು.
ಪರಿಶೀಲನೆ: ಈ ಸಂಬಂಧ ಹಾಸನ ತಾಪಂ ಕಾರ್ಯ ನಿರ್ವಹಣಾಧಿಕಾರಿ ಶಿವಪ್ಪ, ಎಂಜಿನಿಯರ್ ಕುಮಾರಸ್ವಾಮಿ ಗ್ರಾಪಂಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲನೆ ಮಾಡಿದರು. ಕಲ್ಲಹಳ್ಳಿ ಕೊಪ್ಪಲು ಗ್ರಾಮಸ್ಥ ಕೆ.ಎಂ. ರುದ್ರೇಗೌಡ ಪತ್ರಕರ್ತರೊಂದಿಗೆ ಮಾತನಾಡಿ, ರು. 1.40 ಲಕ್ಷ ವೆಚ್ಚದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿ ಇಲ್ಲಿವರೆಗೂ ನೀರು ನೀಡದಿದ್ದರೂ, ಬಿಲ್ ಮಾತ್ರ ಪಾವತಿಯಾಗಿದೆ. ಈ ಸಂಬಂಧ ಬಾರಿ ಅವ್ಯವಹಾರ ನಡೆಸಲಾಗಿದೆ ಎಂದು ದೂರಿದರು.
ಪಾವತಿ: ಶೆಟ್ಟಿಹಳ್ಳಿ ಗ್ರಾಮದ ನಿವಾಸಿ ಸಿದ್ದೇಗೌಡ ಮಾತನಾಡಿ, ಈ ಗ್ರಾಮದಲ್ಲಿ ರಸ್ತೆ ಆಗಿಲ್ಲ. ಜನತಾ ಮನೆ ನಿರ್ಮಿಸಿಲ್ಲ. ಯಾವುದೇ ಒಂದು ಶೌಚಾಲಯ ಆಗದಿದ್ದರೂ, ಬಿಲ್ಗೆ ಹಣ ಮಾತ್ರ ಪಾವತಿ ಮಾಡಲಾಗಿದೆ ಎಂದು ಆರೋಪಿಸಿದರು.
ದುಂಡನಾಯಕನಹಳ್ಳಿ ಗ್ರಾಮಸ್ಥ ರಾಜು ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜೆಸಿಬಿ ಬಳಸಿ ಗ್ರಾಮಸ್ಥರ ಹೆಸರಿನಲ್ಲಿ ನಕಲಿಯಾಗಿ ಹಣ ಪಡೆಯುವ ಮೂಲಕ ಅವ್ಯವಹಾರ ನಡೆಸಲಾಗಿದೆ. ಇದಲ್ಲದೆ ನಾನಾ ಕಾಮಗಾರಿ ಹೆಸರಿನಲ್ಲಿ ಹಣವನ್ನು ಪಡೆದುಕೊಂಡು ಗ್ರಾಮ್ಕಕೆ ಮೋಸ ಮಾಡಿ ಗ್ರಾಮದ ಅಭಿವೃದ್ಧಿಯನ್ನು ಕುಂಠಿತಗೊಳಿಸಿದ್ದಾರೆ ಎಂದು ಹೇಳಿದರು. ಹಿಂದೆ ಇದ್ದ ಗ್ರಾಪಂ ಅಧಿಕಾರಿಗಳು ಅವ್ಯಹಾರ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.