ವೇತನ ವಿಳಂಬ ಖಂಡಿಸಿ ಚಾಮುಂಡೇಶ್ವರಿ ಶುಗರ್ಸ್ ಕಾರ್ಮಿಕರ ಧರಣಿ
ಚನ್ನರಾಯಪಟ್ಟಣ: ತಾಲೂಕಿನ ಶ್ರೀನಿವಾಸಪುರ ಚಾಮುಂಡೇಶ್ವರಿ ಶುಗರ್ ಕಾರ್ಖಾನೆಯ ನೌಕರರಿಗೆ ತಿಂಗಳ ವೇತನ ನೀಡುವಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಕಾರ್ಖಾನೆ ಕಾರ್ಮಿಕರು ಕಾರ್ಖಾನೆ ಎದುರು ಧರಣಿ ನಡೆಸಿದರು.
ಗುರುವಾರ ಬೆಳಗ್ಗೆಯಿಂದಲೇ ಕಾರ್ಖಾನೆ ಕಾರ್ಮಿಕರು ತಮ್ಮ ಕರ್ತವ್ಯಕ್ಕೆ ಹಾಜರಾಗದೆ ತಮಗೆ ವೇತನ ನೀಡುವಲ್ಲಿ ವಿಳಂಬ ಮಾಡುತ್ತಿರುವುದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಧರಣಿ ನಡೆಸಿದರು.
ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವ ಮುನ್ನ ಕಾರ್ಮಿಕರಿಗೆ ಮೊದಲ ವಾರದಲ್ಲಿಯೇ ವೇತನ ನೀಡುತ್ತಿದ್ದರು. ಚಾಮುಂಡೇಶ್ವರಿ ಕಂಪನಿಯವರಿಗೆ ಗುತ್ತಿಗೆ ನೀಡಿದ ನಂತರ ಆಡಳಿತ ಮಂಡಳಿ ಕಾರ್ಮಿಕರನ್ನು ಕಡೆಗಣನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಂಪನಿ ನೀಡುವ ವೇತನವನ್ನು ನಂಬಿರುವ ಕಾರ್ಮಿಕರಿಗೆ ಪ್ರತಿ ತಿಂಗಳ ಮೊದಲ ವಾರದಲ್ಲಿ ತಿಂಗಳ ವೇತನ ನೀಡದಿದ್ದರೆ, ಅವರ ಸ್ಥಿತಿ ಚಿಂತಾಜನಕವಾಗಿರುತ್ತದೆ ಎಂದು ಆಡಳಿತ ಮಂಡಳಿಗೆ ಹಲವು ಬಾರಿ ಮನವಿ ಮಾಡಿದರೂ ಗಮನ ಹರಿಸಿಲ್ಲದ ಕಾರಣ ಬೀದಿಗಿಳಿದು ಹೋರಾಟ ಮಾಡಿ ವೇತನ ಪಡೆಯಬೇಕಾಗಿದೆ ಎಂದು ಕಾರ್ಮಿಕ ಮುಖಂಡ ನಾಗರಾಜು ಆರೋಪಿಸಿದರು.
ಕಾರ್ಖಾನೆಯ ಮಾಲಿಕರು ತಿಂಗಳ ಮೊದಲ ವಾರದಲ್ಲಿ ವೇತನ ನೀಡುವುದು ಸೇರಿದಂತೆ ಕಾರ್ಮಿಕರಿಗೆ ಕಾರ್ಖಾನೆಯಲ್ಲಿ ಕಾರ್ಯ ವಿಂಗಡಣೆಯಲ್ಲಿ ತೋರುತ್ತಿರುವ ತಾರತಮ್ಯ ನಿಲ್ಲಬೇಕು ಎಂದು ಕಾರ್ಮಿಕರು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಕಾರ್ಖಾನೆಯ ಆಡಳಿತ ಮಂಡಳಿಯ ವ್ಯವಸ್ಥಾಪಕ ಉಪ ನಿರ್ದೇಶಕ ಬ್ರಿಟ್ಟೋ ಬೇಟಿ ನೀಡಿ ಕಾರ್ಮಿಕರಿಂದ ಮನವಿ ಸ್ವೀಕರಿಸಿ ಕಾರ್ಮಿಕರಿಗೆ ಮುಂದಿನ ತಿಂಗಳಿಂದ ಮೊದಲ ವಾರದಲ್ಲಿಯೇ ವೇತನ ನೀಡುವುದಾಗಿ ಭರವಸೆ ನೀಡಿ ಜೂನ್ ತಿಂಗಳ ವೇತನವನ್ನು ಮುಂದಿನ ಎರಡು ದಿನದಲ್ಲಿಯೇ ನೀಡಲಾಗುವುದು ಎಂದು ನೀಡಿದ ಭರವಸೆಯಂತೆ ಕಾರ್ಮಿಕರು ತಮ್ಮ ಧರಣಿ ಹಿಂತೆಗೆದುಕೊಂಡರು.