ಹಣ್ಣು ಕೃಷಿಯಿಂದ ಆರ್ಥಿಕ ಬಲ
ಹೊಳೆನರಸೀಪುರ: ರೈತರಿಗೆ ಕಡಿಮೆ ಖರ್ಚಿನಲ್ಲಿ ಉತ್ಪಾದನೆ ಹೆಚ್ಚಿಸುವುದಕ್ಕೆ ಸಾಲ ಸೌಲಭ್ಯಗಳನ್ನು ಮತ್ತು ಅನುದಾನಗಳನ್ನು ಒದಗಿಸುವ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಡಾ.ದೇವರಾಜು ಅಭಿಪ್ರಾಯಪಟ್ಟರು.
ತಾಲೂಕಿನ ಆಲಗೌಡನಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಹಣ್ಣು ಹಂಪಲು ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರಿ ಇಲಾಖೆಗಳ ಸೌಲಭ್ಯ ಮತ್ತು ಮಾಹಿತಿಗಳನ್ನು ರೈತರಿಗೆ ಒದಗಿಸಿಕೊಟ್ಟು ರೈತರ ಬದುಕನ್ನು ಬೆಳಗಿಸಲು ಶ್ರಮಿಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ರೈತರನ್ನು ಲಾಭದಾಯಕ ಕೃಷಿಯೆಡೆಗೆ ಆಕರ್ಷಿಸುವ ನಿಟ್ಟಿನಲ್ಲಿ ಯೋಜನೆಯ ಕಾರ್ಯಕ್ರಮಗಳು ಪೂರಕವಾಗಿದ್ದು, ಮಾವು, ಸಪೋಟ, ಹಲಸು, ಪರಂಗಿ ಹಣ್ಣಿನ ಕೃಷಿಯಿಂದಾಗಿ ಮಳೆ ಏರಿಳಿತಗಳಿಂದ ರೈತರ ಜೀವನ ಅಸ್ತವ್ಯಸ್ತವಾಗದೆ, ಆತ್ಮವಿಶ್ವಾಸದಿಂದ ಕೂಡಿ ಸುಖಮಯವಾಗಿ ಸಾಗಿ ಸ್ವಾವಲಂಬನೆಗೆ ದಾರಿ ಮಾಡಿಕೊಡುತ್ತದೆ ಎಂದರು.
ರೈತರಿಗೆ ಹಣ್ಣು ಹಂಪಲು ಕೃಷಿ ಕುರಿತು ಮಾಹಿತಿ ನೀಡಿದ ದೇವರಾಜು, 1 ಎಕರೆ ಪ್ರದೇಶದಲ್ಲಿ 40 ಮಾವು, ಇಲ್ಲವೇ 50 ಸಪೋಟ, 30 ಹಲಸು, 400 ಪಪ್ಪಾಯಿ, 400 ನುಗ್ಗೆ ಅಥವಾ 1500 ಬಾಳೆಗಿಡ ಹೀಗೆ ಯಾವುದೇ ಗಿಡಗಳನ್ನಾದರೂ ನೆಡಬಹುದು. ಯಾವುದೇ ಹಣ್ಣಿನ ಸಸಿ ನಾಟಿ ಮಾಡಲು ಗುಣಿಗೆ ಮುಕ್ಕಾಲು ಭಾಗ ಕೊಟ್ಟಿಗೆ ಗೊಬ್ಬರ, ಎರೆ ಹುಳು ಗೊಬ್ಬರ, ಹಸಿರೆಲೆ ಗೊಬ್ಬರ ತುಂಬಿಸಬೇಕು. ಅಲ್ಲದೇ, ಜೈವಿಕ ಮತ್ತು ಸಾವಯವ ಗೊಬ್ಬರ ಬಳಕೆಯಿಂದ ಖರ್ಚು ಕಡಿಮೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಪುರುಷೋತ್ತಮ್ ಎನ್. ಮಾತನಾಡಿ, ಅಲ್ಪಾವಧಿ, ದೀರ್ಘಾವಧಿ ಕೃಷಿ ಜೊತೆಗೆ ಹಣ್ಣಿನ ಬೆಳೆಗಳನ್ನು ಬೆಳೆದು ರೈತರು ಸ್ವಾವಲಂಬನೆ ಜೀವನ ನಡೆಸುವಂತಾಗಲು ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಈ ಯೋಜನೆ ಮೂಲಕ ಕೃಷಿ ಅನುದಾನಗಳನ್ನು ನೀಡುತ್ತಿದ್ದಾರೆ ಎಂದರು.
ಪ್ರಗತಿಪರ ರೈತ ಪಾಪೇಗೌಡ ಇದ್ದರು. ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಗೋವಿಂದರಾಜು ಅಧ್ಯಕ್ಷತೆ ವಹಿಸಿದ್ದರು. ಕೃಷಿ ಅಧಿಕಾರಿ ಚಂದ್ರಪ್ಪ ಅಕ್ಕಿವಳ್ಳಿ ನಿರೂಪಿಸಿದರು. ವಲಯ ಮೇಲ್ವಿಚಾರಕ ಜಯರಾಮ್ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಮೀನಾಕ್ಷಿ ವಂದಿಸಿದರು. ಸುಮಾರು 45ಕ್ಕೂ ಹೆಚ್ಚು ರೈತರು ಭಾಗವಹಿಸಿ ಮಾಹಿತಿ ಪಡೆದರು.