ಆಲೂಗಡ್ಡೆ ರೋಗಕ್ಕೆ ವೈಜ್ಞಾನಿಕ ಕ್ರಮ ಅನುಸರಿಸಿ
ಕನ್ನಡಪ್ರಭ ವಾರ್ತೆ, ಹಾಸನ, ಜು. 18
ಹವಾಮಾನ ಬದಲಾವಣೆ, ವಾತಾವರಣ ತಂಪಾಗುವಿಕೆ, ನಿರಂತರ ಜಿಟಿ ಜಿಟಿ ಮಳೆ ಜೊತೆಗೆ ವೈಜ್ಞಾನಿಕ ಪದ್ಧತಿ ಅನುಸರಿಸದೇ ಇರುವುದು ಸಹ ಅಲೂಗೆಡ್ಡೆ ಬೆಳೆಗೆ ಹಲವು ರೀತಿಯ ಬಾಧೆಗಳು ಕಾಣಲು ಪ್ರಮುಖ ಕಾರಣ ಎಂದು ಸಸ್ಯ ರೋಗ ತಜ್ಞ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ತೋಟಗಾರಿಕೆ ಇಲಾಖೆ ವತಿಯಿಂದ ಆಲೂಗೆಡ್ಡೆ ಬೆಳೆ ಸಮಸ್ಯೆಗಳ ಕುರಿತು ರೈತರೊಂದಿಗೆ ಏರ್ಪಡಿಸಲಾಗಿದ್ದ ಸಂವಾದ ಹಾಗೂ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ರೈತರು ಕೇವಲ ಬಿತ್ತನೆ ಬಗ್ಗೆಯಷ್ಟೇ ಗಮನ ಹರಿಸಿದರೆ ಸಾಲದು, ಬೀಜೋಪಚಾರ ಹಾಗೂ ಕೀಟ ಬಾಧೆ ನಿರ್ವಹಣೆ ಬಗ್ಗೆಯೂ ಮುತುವರ್ಜಿ ವಹಿಸಬೇಕು ಎಂದರು.
ಅಂಗಮಾರಿ ರೋಗ: ವಾತಾವರಣದ ತಂಪಾಗುವಿಕೆಯಿಂದಲೂ ಅಂಗಮಾರಿ ರೋಗ ಕಂಡು ಬರುತ್ತದೆ. ಆದರೆ ಇದು ಕೇವಲ ಆ ಕ್ಷಣಕ್ಕೆ ಹುಟ್ಟುವುದಿಲ್ಲ. ಕೆಲವೇ ದಿನಗಳಲ್ಲಿ ಬಹು ಪ್ರದೇಶಗಳನ್ನು ವ್ಯಾಪಿಸುವ ಸಾಮರ್ಥ್ಯ ಹೊಂದಿದೆ. ಗಾಳಿ, ನೀರಿನ ಮೂಲಕವೂ ಹರಡಬಲ್ಲದು. ಆಲೂಗೆಡ್ಡೆ ಮಾದರಿಯ ಇತರೆ ತರಕಾರಿ ಬೆಳೆಗಳ ಮೂಲಕವೂ ವ್ಯಾಪಿಸುತ್ತದೆ ಎಂದರು.
ಡಾ. ಬಸವರಾಜ್ ಅವರು ನುಸಿ ಕೀಟ ರೋಗ(ಕರಿಕಡ್ಡಿ ರೋಗ)ದ ಬಗ್ಗೆ ವಿವರಿಸಿ ಅದರ ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಆಲೂಗೆಡ್ಡೆ ಬಿತ್ತನೆ ಬೀಜವನ್ನು ವಿಶ್ವಾಸಾರ್ಹ ಮೂಲಗಳಿಂದಲೇ ಪಡೆಯಬೇಕು ಹಾಗೂ ಬೀಜ ಖರೀದಿಸಿದ ಬಾಬ್ತು, ಬೀಜದ ತಳಿ, ದರ, ಇತ್ಯಾದಿ ವಿವರಗಳನ್ನು ಒಳಗೊಂಡ ಹಣ ಪಾವತಿ ಬಿಲ್ಲನ್ನು ಕಡ್ಡಾಯವಾಗಿ ವ್ಯಾಪಾರಿಗಳಿಂದ ಪಡೆಯುವುದು, ಖರೀದಿಸುವಾಗ ಪ್ರತೀ ಚೀಲವನ್ನು ಪರೀಕ್ಷಿಸಿ ಗೆಡ್ಡೆಗಳು ಕೊಳೆತಿಲ್ಲದಿರುವುದನ್ನು ಖಾತ್ರಿಪಡಿಸಿಕೊಂಡು ನಂತರ ಖರೀದಿಸಬೇಕು ಎಂದರು.
ತಳಿಗಳ ಬಗ್ಗೆ ಮಾಹಿತಿ: ಡಾ.ವೆಂಕಟಾಚಲ ಅವರು ವಿವಿಧ ಆಲೂಗೆಡ್ಡೆ ತಳಿಗಳ ಬಗ್ಗೆ ಮಾಹಿತಿ ನೀಡಿದರು. ಡಾ.ವಿಷ್ಣುವರ್ಧನ್ ಅವರು ತಳಿಗಳಾದ ಕುಫ್ರಿ ಜ್ಯೋತಿ, ಕುಫ್ರಿ ಸೂರ್ಯ ಇನ್ನಿತರ ಆಲೂಗೆಡ್ಡೆ ತಳಿಗಳನ್ನು ಅಭಿವೃದ್ಧಿಪಡಿಸಲಾಗಿರುವ ಆಲೂಗೆಡ್ಡೆ ತಳಿಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲೆಗೆ ಸೂಕ್ತವಾದ ತಳಿಗಳಾದ ಕುಫ್ರಿ ಜ್ಯೋತಿ, ಕುಫ್ರಿ ಸೂರ್ಯಇನ್ನಿತರ ಆಲೂಗೆಡ್ಡೆ ತಳಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಆಲೂಗಡ್ಡೆ ಬಿತ್ತನೆ ಮಾಡುವ ಸಂದರ್ಭದಲ್ಲಿ ಭೂಮಿ ಚೆನ್ನಾಗಿ ತಂಪಾಗಿರಬೇಕು ಹಾಗೂ ಆಲೂಗೆಡ್ಡೆ ಕಣ್ಣುಗಳು ಹೊಡೆದು ಉಬ್ಬಿರಬೇಕು. ಆಲೂಗೆಡ್ಡೆ ಬಿತ್ತನೆ ಮಾಡುವಾಗ ಹಾಗೂ ಮಾಡಿದ ನಂತರ ಕಡ್ಡಾಯವಾಗಿ ಸಸ್ಯ ಸಂರಕ್ಷಣಾ ಔಷಧಿಗಳನ್ನು ಸಿಂಪರಣೆ ಮಾಡಬೇಕು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಕೀಲ್ ಅಹಮದ್, ಆಲೂಗೆಡ್ಡೆ ಸಂಶೋಧನಾ ಸಂಸ್ಥೆಯ ಪ್ರೊ. ಡಾ.ವಿಷ್ಣುವರ್ಧನ್, ಸಹಾಯಕ ಪ್ರೊ. ಡಾ. ಪ್ರಸಾದ್, ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಡಾ.ಬಸವರಾಜು ಊಟಿ ಸಿ.ಪಿ.ಆರ್.ಐ.ನ ವಿಜ್ಞಾನಿ ಡಾ.ವೆಂಕಟಾಚಲನ್, ವಿಜ್ಞಾನಿ ಡಾ.ಆರತಿ ಮತ್ತಿತರರು ಇದ್ದರು.
ಮಾಹಿತಿ ಕಾರ್ಯಾಗಾರದಲ್ಲಿ ಆಲೂಗೆಡ್ಡೆ ಬೆಳೆ ಬೇಸಾಯ ಪದ್ದತಿಗಳು ಹಾಗೂ ರೋಗ ನಿರ್ವಹಣೆ, ಬೀಜೋಪಚಾರ, ಔಷದಿ ಸಿಂಪರಣೆಗಳ ಬಗ್ಗೆ ಮಾಹಿತಿ ನೀಡುವ ಕರಪತ್ರಗಳನ್ನು ವಿತರಿಸಲಾಯಿತು.