ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಕಲೇಶಪುರ ಪುರಸಭೆ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಜೈನ್

Mainashree
Updated On : 18 Jul 2014, 10:54 am

ಸಕಲೇಶಪುರ: ಪುರಸಭೆಯ ನೂತನ ಅಧ್ಯಕ್ಷರಾಗಿ ಸಂತೋಷ್‌ಕುಮಾರ್ ಜೈನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಏಕೈಕ ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್ ಪಾರ್ವತಿ, ಸಂತೋಷ್‌ಕುಮಾರ್ ಜೈನ್ ಅಧ್ಯಕ್ಷರ ಆಯ್ಕೆ ಘೋಷಿಸಿದರು.
ಪಕ್ಷದ ಒಡಂಬಡಿಕೆಯಂತೆ ಮೊದಲ 4 ತಿಂಗಳ ಅವಧಿಗೆ ಅಧ್ಯಕ್ಷರಾಗಿದ್ದ ಸತೀಶ್ ರಾಜಿನಾಮೆ ನೀಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರ ಬೆಂಬಲದೊಂದಿಗೆ ಜೆಡಿಎಸ್ ಸದಸ್ಯರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಿ ಈ ತಿಂಗಳ ಮೂರರಂದು ಪದಚ್ಯುತಿಗೊಳಿಸಲಾಗಿತ್ತು. ಆದ್ದರಿಂದ ಇಂದು ಅಧ್ಯಕ್ಷರ ಚುನಾವಣೆ ನಡೆಯಿತು. ಮೊದಲೇ ಪಕ್ಷದಲ್ಲಿ ತೀರ್ಮಾನವಾದಂತೆ ಅಧ್ಯಕ್ಷ ಸ್ಥಾನಕ್ಕೆ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಸಂತೋಷ್‌ಕುಮಾರ ಜೈನ್ ಆಯ್ಕೆಯಾಗಿದ್ದಾರೆ.
ಗೆಲುವಿನ ಸಂಭ್ರಮ: ರಾಜ್ಯದಲ್ಲೆ ಪ್ರಥಮ ಬಾರಿಗೆ ಜೈನ್ ಸಮಾಜದ (ಶ್ವೇತಾಂಬರ್) ವ್ಯಕ್ತಿಯೊಬ್ಬ ಅಧ್ಯಕ್ಷರಾದ ಕಾರಣ ಪಟ್ಟಣದ ಜೈನ್ ಸಮಾಜದವರು ಸೇರಿದಂತೆ ಬೆಂಗಳೂರು ಹಾಗೂ ಹಾಸನದಿಂದಲೂ ಆಗಮಿಸಿದ್ದ ಜೈನ್ ಸಮಾಜದ ಮುಖಂಡರು ಅದ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ಹಾಜರಿದ್ದು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ನಾಮಪತ್ರ ಸಲ್ಲಿಕೆಯಾದ ನಂತರ ಚುನಾವಣೆ ಪ್ರತ್ರಿಯೆ ಆರಂಭಕ್ಕೂ ಮುನ್ನವೇ ಬೆಂಗಳೂರಿನಿಂದ ಕರೆಸಲಾಗಿದ್ದ ವಾದ್ಯಗೋಷ್ಠಿ ನಡೆಸಲಾಯಿತಲ್ಲದೇ ಪುರಭವನದ ಮುಂಭಾಗ ಹಾಗೂ ಪಾರ್ಶ್ವನಾಥ್ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಚ್.ಕೆ ಕುಮಾರಸ್ವಾಮಿ ಮುಂದಿನ ದಿನಗಳಲ್ಲಿ ಪಟ್ಟಣದ ಸರ್ವತೋಮುಖ ಬೆಳವಣಿಗೆಗೆ ಎಲ್ಲಾ ಪುರಸಭೆ ಸದಸ್ಯರು ತಮ್ಮ ಶಕ್ತಿಮೀರಿ ಶ್ರಮಿಸಲಿದ್ದು ಇವರಿಗೆ ಅಗತ್ಯ ಬೆಂಬಲ ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ಪುರಸಭೆ ಉಪಾದ್ಯಕ್ಷ ಮುಖೇಶ್ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ನಾಗಶೆಟ್ಟಿ, ತಾಲೂಕು ಶಿರಸ್ತೇದಾರ್ ರಮೇಶ್ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement