ಹೇಮಾವತಿ ನಮಗಿಲ್ಲ ತಮಿಳುನಾಡಿಗುಂಟು!
ದಯಾಶಂಕರ ಮೈಲಿ
ಹಾಸನ: ಹೇಮಾವತಿ ಜಲಾಶಯದಲ್ಲಿ ನಮ್ಮವರಿಗೆ ಕೃಷಿ ಮಾಡಲು ನೀರಿಲ್ಲ. ಆದರೆ ತಮಿಳುನಾಡು ಕೃಷಿಗೆ ರಾತ್ರೋ ರಾತ್ರಿ 5660 ಕ್ಯುಸೆಕ್ ಬಿಡಲಾಗಿದೆ. ಇದೆಂಥಾ ನ್ಯಾಯ?
ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳು ಭರ್ತಿಯಾಗಿದ್ದರೆ, ಈ ಭಾಗದ ಲಕ್ಷಾಂತರ ಎಕರೆ ನೀರಾವರಿ ಪ್ರದೇಶದಲ್ಲಿ ಬತ್ತದ ನಾಟಿ ಆರಂಭವಾಗಬೇಕಿತ್ತು. ಆದರೆ ಜಲಾಶಯಗಳು ಬರಿದಾಗಿವೆ. ಹೀಗಾಗಿ ಬತ್ತ ಬೆಳೆಯಲು ಸಿದ್ಧತೆ ಮಾಡಿಕೊಳ್ಳಬೇಡಿ. ನಾಲೆಗಳಿಂದ ನೀರು ಹರಿಸುವುದಿಲ್ಲ ಎಂದು ಹೇಮಾವತಿ ಜಲಾಶಯದ ಎಂಜಿನಿಯರ್‌ಗಳು ರೈತರಿಗೆ ಸೂಚಿಸಿದ್ದರು. ಇದೀಗ ಕದ್ದುಮುಚ್ಚಿ ಹೆಚ್ಚಿನ ಪ್ರಮಾಣದ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ.
ಇದೀಗ ಎಂಜಿನಿಯರ್‌ಗಳ ಪ್ರಕಾರವೇ 5660 ಕ್ಯುಸೆಕ್ ಬಿಡಲಾಗಿದೆ. ಆದರೆ ನೀರು ಹೊರ ಹೋಗುತ್ತಿರುವ ಆರ್ಭಟ ನೋಡಿದರೆ ಇದರ ಎರಡು ಪಟ್ಟು ಅಂದರೆ 10,000 ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆಯೇ ಎಂಬ ಅನುಮಾನವನ್ನು ರೈತ ಸಂಘದ ಮುಖಂಡ ಕಣಗಾಲು ಮೂರ್ತಿ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಬತ್ತ, ಕಬ್ಬು ಬೆಳೆಯಲು ನೀರಿಲ್ಲ. ಇದನ್ನು ಮರೆತು ರಾಜ್ಯ ಸರ್ಕಾರ ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ಮೂಲಕ ರೈತರಿಗೆ ದ್ರೋಹ ಬಗೆಯಲಾಗುತ್ತಿದೆ. ಇಲ್ಲಿಂದ ಬಿಡುಗಡೆಯಾದ ನೀರು ಕೆಆರ್‌ಎಸ್‌ಗೆ ತಲುಪಿ, ಅಲ್ಲಿಂದ ತಮಿಳುನಾಡಿಗೆ ಹರಿಯುತ್ತದೆ.
ದಾಖಲೆಗಾಗಿ ಬಿಟ್ಟರು: ಸುಪ್ರಿಂ ಕೋರ್ಟ್‌ನಲ್ಲಿ ವಿಚಾರಣೆ ನಡೆಸುವ ಕಾಲಕ್ಕೆ ಕರ್ನಾಟಕದಿಂದ ನಿಗದಿತ ಪ್ರಮಾಣದ ನೀರು ಬಿಡುಗಡೆ ಮಾಡಿರುವ ಬಗ್ಗೆ ದಾಖಲೆ ಸಮೇತ ನೀಡಬೇಕು. ಮೆಟ್ಟೂರು ಡ್ಯಾಂನಲ್ಲಿ ನೀರು ಸಂಗ್ರಹವಾಗಿರುವ ಆಧಾರದ ಮೇಲೆ ಕರ್ನಾಟಕದಿಂದ ಎಷ್ಟು ಪ್ರಮಾಣದ ನೀರು ಬಿಡಲಾಗಿದೆ ಎಂಬುದು ತಿಳಿಯುತ್ತದೆ. ಬೇರೆ ಮಾರ್ಗವಿಲ್ಲದೇ ಹೀಗೆ ಮಾಡಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು “OÚ«ÚsÚ®ÚúڒOæQ ತಿಳಿಸಿದ್ದಾರೆ.
ಎಷ್ಟಿರಬೇಕಿತ್ತು? ಎಷ್ಟಿತ್ತು?: ಜಲಾಶಯದ ಗರಿಷ್ಠ ಮಟ್ಟ 2922 ಅಡಿ. ಆದರೆ ಶುಕ್ರವಾರ 2888 ಅಡಿ ಇತ್ತು. ಪ್ರತಿ ಬಾರಿಯೂ ಜಲಾಶಯದ ಮಟ್ಟ 2910-12 ಅಡಿ ಇದ್ದಾಗ ಮಾತ್ರ ನೀರು ಬಿಡಲಾಗುತ್ತಿತ್ತು. ಆದರೆ ಈ ಬಾರಿ 34 ಅಡಿ ಬಾಕಿ ಇರಬೇಕಾದರೇ ಬಿಟ್ಟಿರುವುದು ಇದೇ ಮೊದಲು. ಇದು ಸಾಕಷ್ಟು ಟೀಕೆಗೆ ಗುರಿಯಾಗಿದೆ.
ಪ್ರಸ್ತುತ 12.925 ಟಿಎಂಸಿ ನೀರು ಸಂಗ್ರಹವಾಗಿದೆ. ಸಂಗ್ರಹ ಸಾಮರ್ಥ್ಯ 37.103 ಟಿಎಂಸಿ. ಇನ್ನೂ 24.178 ಟಿಎಂಸಿ ನೀರು ಹರಿದು ಬರುತ್ತಿದೆ. ತುಮಕೂರು ಜಿಲ್ಲೆಯ ಕುಡಿಯುವ ನೀರು ಮತ್ತು ಕೃಷಿಗಾಗಿ ಈ ಜಲಾಶಯದ ನೀರನ್ನೇ ಬಳಸಲಾಗುತ್ತದೆ.