ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕೋರ್ಟ್ ನೂತನ ಕಟ್ಟಡ ಕಾಮಗಾರಿ ವಿಳಂಬ: ವಿಷಾದ

Mainashree
Updated On : 19 Jul 2014, 10:09 am

ಕನ್ನಡಪ್ರಭ ವಾರ್ತೆ, ಹಾಸನ, ಜು. 26
ನಗರದ ಹೊರವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ನ್ಯಾಯಾಲಯದ ಕಟ್ಟಡದ ಕಾಮಗಾರಿ ಆರಂಭವಾಗಿ ಏಳು ವರ್ಷಗಳಾಗಿವೆ. ಆದರೂ ಇನ್ನೂ ಪೂರ್ಣಗೊಂಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಹೈಕೋರ್ಟ್ ನ್ಯಾಯಾಧೀಶ ಕೆ.ಎಲ್. ಮಂಜುನಾಥ್ ಅವರು, ಕಕ್ಷಿದಾರರು ಮತ್ತು ವಕೀಲರ ಹಿತದೃಷ್ಟಿಯಿಂದ ಕಾಮಗಾರಿ ತ್ವರಿತವಾಗಿ ಪೂರ್ಣಗೊಳ್ಳಬೇಕೆಂದರು.
ನಗರದ ಹೊಸ ಬಸ್ ನಿಲ್ದಾಣ, ಚನ್ನಪಟ್ಟಣದಲ್ಲಿರುವ ನೂತನ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಜಿಲ್ಲಾ ನ್ಯಾಯಾಂಗ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತು ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಪರ್ಯಾಯ ವ್ಯಾಜ್ಯಗಳ ಪರಿಹಾರ ಕೇಂದ್ರ ಕಟ್ಟಡ ಉದ್ಘಾಟನೆ ಮತ್ತು ಎರಡನೇ ಹಂತದ ಜಿಲ್ಲಾ ನ್ಯಾಯಾಲಯ ಕಟ್ಟಡ ಸಂಕೀರ್ಣ ಪೂರಕ ನ್ಯಾಯಾಲಯ ಕಟ್ಟಡ ಸಂಕೀರ್ಣ ಸರ್ಕಾರಿ ಅಭಿಯೋಜಕರ ಕಟ್ಟಡ ಸಂಕೀರ್ಣ  ನ್ಯಾಯಾಧೀಶರ ವಸತಿ ಗೃಹ ಸಂಕೀರ್ಣ ಕಾರ್ಯಕ್ರಮದಲ್ಲಿ ಶನಿವಾರ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಎಲ್ಲರಿಗೂ ನ್ಯಾಯ ಸಿಗಲಿ: ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಮಾತನಾಡಿ, ಸಮಾಜದಲ್ಲಿ ಜನರಿಗೆ ಅಲ್ಪ ಸಲ್ಪ ನ್ಯಾಯ ಸಿಗುತ್ತಿದ್ದರೇ ಅದು ನ್ಯಾಯಾಂಗದಿಂದ. ಕೆಲ ವಕೀಲರು ಮಾಡುವ ತಪ್ಪಿಗೆ ಬೇಸರ ಉಂಟಾಗಿರಬಹುದು. ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾದವರಿಗೂ ನ್ಯಾಯಾಲಯದಲ್ಲಿ ಸರಿಯಾದ ನ್ಯಾಯ ಸಿಗಲಿ ಎಂದು ಹಾರೈಸಿದರು.
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಮಾತನಾಡಿ, ನೂತನ ನ್ಯಾಯಾಲಯದ ಕಟ್ಟಡ ಕಾಮಗಾರಿ ತ್ವರಿತವಾಗಿ ನಡೆಯಬೇಕಾಗಿದೆ  ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ  ಎ.ವಿ.ಚಂದ್ರಶೇಖರ್, ಜಿಲ್ಲಾಧಿಕಾರಿ ವಿ. ಅನ್ವುಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರವಿ ಡಿ.ಚನ್ನಣ್ಣನವರ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್, ವಕೀಲರ ಸಂಘದ ಅಧ್ಯಕ್ಷರಾದ ದೇವರಾಜೇಗೌಡ ಇತರರು ಪಾಲ್ಗೊಂಡಿದ್ದರು.
ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಆರ್.ಜೆ.ಸತೀಶ್ ಸಿಂಗ್ ಸ್ವಾಗತಿಸಿದರು.
89ಕೋಟಿ ಯೋಜನೆ
ಮಾಜಿ ಸಚಿವ ಎಚ್.ಡಿ. ರೇವಣ್ಣ ಮಾತನಾಡಿ, ಮೊದಲು 72 ಕೋಟಿ ಅಂದಾಜಿನಲ್ಲಿ 2ನೇ ಹಂತದ ನ್ಯಾಯಾಲಯ ಕಟ್ಟಡ ನಿರ್ಮಿಸಲಾಯಿತು. ಈಗ ಒಟ್ಟು 89 ಕೋಟಿಗೆ ಮತ್ತೆ ಅನುಮತಿ ದೊರಕಿದೆ. ನೂತನ ನ್ಯಾಯಾಲಯಕ್ಕೆ ಕೇಂದ್ರದಿಂದ ಹಣ ಬಿಡುಗಡೆಯಾಗಿದೆ  ಎಂದರು. ಹೊಸ ಬಸ್ ನಿಲ್ದಾಣದ ಬಳಿ ದಿವಸಕ್ಕೆ 2 ಸಾವಿರ ಬಸ್ ಸಂಚರಿಸುತ್ತವೆ. ಹೌಸಿಂಗ್ ಬೋರ್ಡ್ ರಸ್ತೆ ಬದಿಯೇ ಮಳಿಗೆ ಕಟ್ಟಡ ನಿರ್ಮಿಸಿದ್ದು, ಅದು ಮುಂದೆ ತೊಂದರೆ ಆಗಬಹುದು. ಈ ಭಾಗದಲ್ಲಿ 2 ಸಾವಿರ ಮನೆಗಳಿದ್ದು, ಅವರ ವಾಹನಗಳೂ ಕೂಡ ಹೆಚ್ಚಾಗಬಹುದು. ಪ್ರತಿ ಕಾಮಗಾರಿ ಸಾರ್ವಜನಿಕರ ಹಿತಾದೃಷ್ಟಿಯಲ್ಲಿ ನೋಡಿ ನಿರ್ಮಿಸಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement