ರೈತರಿಗೆ ಕೃಷಿ ತಾಂತ್ರಿಕ ಮಾಹಿತಿ ಅಗತ್ಯ: ಜಿಪಂ ಸದಸ್ಯ ಪುರುಷೋತ್ತಮ ಸಲಹೆ
ಆಲೂರು: ಕೃಷಿ ಇಲಾಖೆ ವತಿಯಿಂದ ಸಹಾಯಧನದಲ್ಲಿ ಎಲ್ಲಾ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ರಾಗಿ, ಬತ್ತ, ಮುಸುಕಿನಜೋಳ ಬಿತ್ತನೆಬೀಜ ವಿತರಿಸುತ್ತಿದ್ದು, ರೈತರು ಇದರ ಸುದಪಯೋಗ ಪಡೆಯಬೇಕೆಂದು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಕೆ.ಬಿ.ಸುಬ್ರಹ್ಮಣ್ಯ ತಿಳಿಸಿದರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ತಾಲೂಕು ಮಟ್ಟದ ಭೂ ಚೇತನ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಭೂಚೇತನ ಯೋಜನೆಯಡಿಯಲ್ಲಿ ಶೇಕಡ 50ರ ಸಹಾಯಧನದಲ್ಲಿ ಲಘುಪೋಷಕಾಂಶಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.
ತಾಂತ್ರಿಕ ಮಾಹಿತಿ: ಜಿಪಂ ಸದಸ್ಯ ಪುರುಷೋತ್ತಮ ಮಾತನಾಡಿ, ದೇಶದ ಪ್ರಗತಿಯಲ್ಲಿ ಕೃಷಿಯ ಮಹತ್ವ ಹಾಗೂ ಮುಂದಿನ ದಿನಗಳಲ್ಲಿ ಬೇಕಾಗುವ ಆಹಾರದ ಬೇಡಿಕೆಯನ್ನು ಮುಂದಿಟ್ಟುಕೊಂಡು ಕೃಷಿಯಲ್ಲಿ ರೈತರು ಸಕ್ರೀಯವಾಗಿ ಪಾಲ್ಗೋಂಡು ಕೃಷಿ ಇಲಾಖೆಯ ಸಂಪರ್ಕದೊಂದಿಗೆ ತಾಂತ್ರಿಕ ಮಾಹಿತಿಯನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಹಾಗೂ ಮುಖ್ಯಸ್ಥ ಡಾ.ಬಸವರಾಜು, ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ.ಚನ್ನಕೇಶವ, ಬೇಸಾಯ ಶಾಸ್ತ್ರ ವಿಭಾಗದ ಡಾ.ಭೈರಪ್ಪ, ಹೆಚ್.ಬಿ.ಮಲ್ಲಪ್ಪ, ತಾಪಂ ಅಧ್ಯಕ್ಷ ಎಸ್.ಸಿ.ಕಾಂತರಾಜು ಮಾತನಾಡಿದರು. ಪಾಳ್ಯ ಹೋಬಳಿಯ ಕೃಷಿ ಅಧಿಕಾರಿ ಪ್ರಸಾದ್ ಮತ್ತು ಆಲೂರು ತಾಲೂಕಿನ ತಾಂತ್ರಿಕ ಅಧಿಕಾರಿ ಎಸ್.ವಿನಯ್ ಇದ್ದರು.