ಸಾವಯವ ಕೃಷಿಕರು ಆತ್ಮಹತ್ಯೆ ಮಾಡಿಕೊಂಡಿಲ್ಲ: ಗಿಡ್ಡೇಗೌಡ
ಕನ್ನಡಪ್ರಭ ವಾರ್ತೆ, ಹಾಸನ, ಜು. 20
ತಾಲೂಕಿನ ಶಾಂತಿಗ್ರಾಮ ಹೋಬಳಿ ಕಾರೇಕೆರೆ ಗ್ರಾಮದಲ್ಲಿ ಕೃಷಿ ಇಲಾಖೆ, ಜೀವವೈವಿಧ್ಯ ಸಂರಕ್ಷಣೆ ಮತ್ತು ಸಂಶೋಧನಾ ಟ್ರಸ್ಟ್ ಹಾಗೂ ಕಾರೆಗೆರೆ ಜೈವಿಕ ಕೃಷಿಕರ ಸಂಘದ ಆಶ್ರಯದಲ್ಲಿ ಸಾವಯವ ಭಾಗ್ಯ ಯೋಜನೆ ಅಡಿ ಸಾವಯವ ಕೃಷಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕಾರ್ಯಾಗಾರದಲ್ಲಿ ಪ್ರಗತಿಪರ ಹಾಗೂ ಸಾವಯವ ಕೃಷಿಕ ಬ್ರಹ್ಮದೇವರ ಹಳ್ಳಿ ಗಿಡ್ಡೇಗೌಡ ಮಾತನಾಡಿ, ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆ ಬೆಳೆಯುತ್ತಿರುವ ಯಾವುದೇ ರೈತ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ರಾಜ್ಯದಲ್ಲಿ ಇದುವರೆಗೂ ವರದಿಯಾಗಿಲ್ಲ ಎಂದರು.
ಸಾಂಪ್ರದಾಯಕ ಕೃಷಿ: ಆದರೆ ಅಧಿಕ ಇಳುವರಿ ಪಡೆದು ಲಾಭ ಗಳಿಸುವ ದುರಾಸೆಯಿಂದ ಭೂಮಿಯಲ್ಲಿ ಸೂಕ್ಷ್ಮಜೀವಿಗಳಿರುವುದನ್ನು ಅರಿಯದೆ ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಗಳನ್ನು ಬಳಸಿ ಇವುಗಳನ್ನು ನಾಶಪಡಿಸಲಾಗುತ್ತಿದೆ. ಆದುದರಿಂದ ರೈತರಾದ ನಾವು ಸಾಂಪ್ರದಾಯಿಕ ಕೃಷಿಗೆ ಒತ್ತು ನೀಡಬೇಕು ಎಂದರು.
ಪ್ರಗತಿಪರ ಕೃಷಿಕ ಸಂತೇಶಿವರ ಬಸವರಾಜು ಮಾತನಾಡಿ, ಒಂದು ನಾಟಿ ಹಸುವಿನ ಸಗಣಿ ಮತ್ತು ಗಂಜಲದಿಂದ ಸುಮಾರು 10 ಎಕರೆ ಜಮೀನಿಗಾಗುವಷ್ಟು ಪೋಷಕಾಂಶಗಳನ್ನು ಬಳಸಿಕೊಂಡು ಕೃಷಿಯನ್ನು ಮಾಡಬಹುದು ಎಂದರು.
ಅಝೋಲಾ ಬಳಸಿ: ಅಝೋಲಾ ಬೆಳೆ ಇದೊಂದು ಪಾಚಿ ಜಾತಿಗೆ ಸೇರಿದ ಸಸ್ಯವಾಗಿದ್ದು, ವಾತಾವರಣದಲ್ಲಿರುವ ಸಾರಜನಕ ಅಂಶವನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಹೊಂದಿದೆ. ಬತ್ತದ ಗದ್ದೆಗೆ ಇದನ್ನು ಬಿಡುವುದರಿಂದ ಶೇಕಡ 75 ರಷ್ಟು ರಾಸಾಯನಿಕ ಸಾರಜನಕವನ್ನು ಕಡಿಮೆ ಮಾಡಬಹುದಾಗಿದೆ ಎಂದರು.
ಬಿಸಿಆರ್‌ಟಿ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ, ಕಾರೇಕೆರೆ ಜೈವಿಕ ಕೃಷಿಕರ ಸಂಘದ ಅಧ್ಯಕ್ಷ ಕೆ.ಟಿ. ರುಕ್ಮಾಂಗದ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕೃಷಿ ಅಧಿಕಾರಿ ಧರ್ಮಪ್ಪ ಇದ್ದರು. ಬಿ.ಸಿ.ಆರ್.ಟಿ ಕ್ಷೇತ್ರಾಧಿಕಾರಿ ಹೆಚ್. ಮಹೇಶ್ ಸ್ವಾಗತಿಸಿದರು.