ಜಾರ್ಜ್ ರಾಜಿನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಕ.ಪ್ರ.ವಾರ್ತೆ , ಹಾಸನ , ಜು.21
ಗೃಹ ಖಾತೆಯನ್ನು ಸಮರ್ಪಕವಾಗಿ ನಿರ್ವಹಿಸದೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಅರಾಜಕತೆ ನಿರ್ಮಾಣಕ್ಕೆ ಕಾರಣರಾಗಿರುವ ಗೃಹ ಸಚಿವ ಕೆ.ಜೆ.ಜಾರ್ಜ್ ಕೂಡಲೇ ರಾಜಿನಾಮೆ ನೀಡುವಂತೆ ಆಗ್ರಹಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಜಿಲ್ಲಾ ಬಿಜೆಪಿ ಕಚೇರಿಯಿಂದ ಮೆರವಣಿಗೆ ಪ್ರಾರಂಭಿಸಿ ಎನ್.ಆರ್.ವೃತ್ತ, ಕಸ್ತೂರಿ ಬಾ ರಸ್ತೆ, ಹೇಮಾವತಿ ಪ್ರತಿಮೆ ಹಾಗೂ ಬಿ.ಎಂ.ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಕೆಲ ಸಮಯ ಪ್ರತಿಭಟನೆಯ ನಡೆಸಿ ಜಿಲ್ಲಾಧಿಕಾರಿಗೆ ತಂದ ಮನವಿ ನೀಡಿದರು.
ದೌರ್ಜನ್ಯ ಹೆಚ್ಚಳ: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡ ದಿನದಿಂದ ಅಪರಾಧ ಪ್ರಕರಣಗಳು ಹೆಚ್ಚಾಗಿದೆ. ಅದರಲ್ಲೂ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯಗಳು ಗಣನೀಯವಾಗಿ ಹೆಚ್ಚಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೃಹ ಸಚಿವರು ಅಧಿಕಾರ ವಹಿಸಿಕೊಂಡಾಗಿನಿಂದಲೂ ಪಕ್ಷಪಾತಿ ಧೊರಣೆಯನ್ನೇ ಅನುಸರಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯದಲ್ಲಿ ಸುರಕ್ಷಿತ ಆಡಳಿತ ನೀಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಎಡಿಜಿಪಿ ರವೀಂದ್ರನಾಥ್ ಪ್ರಕರಣ, ಕಾಶಪ್ಪನವರ್ ಪ್ರಕರಣದಲ್ಲಿ ಗೃಹ ಸಚಿವರ ಅಸಹಾಯಕತೆ ಬಟಾಬಯಲಾಗಿದೆ ಎಂದು ಅವರು ದೂರಿದರು.
ಜಾರ್ಜ್ ರಾಜಿನಾಮೆ ನೀಡಲಿ: ಇಲಾಖೆಯನ್ನು ಸಮರ್ಪಕವಾಗಿ ನಿರ್ವಹಿಸದ ಗೃಹ ಸಚಿವರನ್ನು ಕೂಡಲೇ ರಾಜೀನಾಮೆ ನೀಡಬೇಕು ಇಲ್ಲವಾದರೇ ರಾಜ್ಯದ ಹಿತದೃಷ್ಟಿಯಿಂದ ಮುಖ್ಯಮಂತ್ರಿಗಳೇ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರೇಣುಕುಮಾರ್, ಉಪಾಧ್ಯಕ್ಷ ಲೋಹಿತ್ ಗೌಡ, ಪ್ರಧಾನ ಕಾರ್ಯದರ್ಶಿ ಡಿ.ಪ್ರಸನ್ನಕುಮಾರ್, ಅಗಿಲೆ ಯೋಗಿಶ್, ಲಕ್ಷ್ಮೇಗೌಡ, ಅಮೀತ್ ಶೆಟ್ಟಿ, ಮಂಜುನಾಥ ಶರ್ಮ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಚನ್ನಕೇಶವ, ಪ್ರಧಾನ ಕಾರ್ಯದರ್ಶಿ ನಾಗೇಶ್, ರಾಜೇಶ್ವರಿ, ಪುನೀತ್ ಹಾಗೂ ಇತರರು ಇದ್ದರು.