ವೈದ್ಯರ ನೇಮಕ, ಆಸ್ಪತ್ರೆ ಸ್ವಚ್ಛತೆಗೆ ಸೂಚನೆ
ಕನ್ನಡಪ್ರಭ ವಾರ್ತೆ, ಹಾಸನ. ಜು 21
ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳು, ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೊರತೆಯಿರುವ ವೈದ್ಯರನ್ನು ನೇಮಿಸುವುದರ ಜೊತೆಗೆ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಜಿಲ್ಲಾ ಪಂಚಾಯ್ತಿ ಹಂಗಾಮಿ ಅಧ್ಯಕ್ಷ ಶಿವಶಂಕರ್ ಕುಂಟೆ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ವೇಳೆ ಶಸ್ತ್ರ ಚಿಕಿತ್ಸೆ ಅಗತ್ಯವೆನಿಸಿದಾಗ ಖಾಸಗಿ ನರ್ಸಿಂಗ್ ಹೋಂಗಳಿಗೆ ಕಳುಹಿಸಲಾಗುತ್ತಿದೆ. ಇದು ಸಂಪೂರ್ಣವಾಗಿ ನಿಲ್ಲಬೇಕು ಎಂದು ಎಚ್ಚರಿಸಿದರು.
ನಿಯಮಾವಳಿ ಸಡಿಲಿಸಿ: ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣಗೌಡ ಹಾಗೂ ಕೈಗಾರಿಕಾ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ನಂಜುಂಡಸ್ವಾಮಿ ಅವರು ಜಿಲ್ಲೆಯಲ್ಲಿ ಆಲೂಗೆಡ್ಡೆ ಬೆಳೆಗೆ ತಗಲಿರುವ ಅಂಗಮಾರಿ ರೋಗ, ಕರಿಕಡ್ಡಿ ರೋಗ, ಬೆಳೆ ವಿಮೆಗಳ ಬಗ್ಗೆ ಪ್ರಸ್ತಾಪಿಸಿ ಸರ್ಕಾರದಿಂದ ಔಷಧಿ ರಸಾಯನಿಕಗಳಿಗೆ ನೀಡಲಾಗುವ ಸಬ್ಸಿಡಿ ಹಣ ಪಡೆಯಲು ರೈತರನ್ನು ದಾಖಲೆಗಳ ನೆಪದಲ್ಲಿ ಅಲೆದಾಡಿಸದಂತೆ ಹಾಗೂ ನಿಯಮಾವಳಿಗಳನ್ನು ಸರಳೀಕರಣಗೊಳಿಸುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸಭೆಗೆ ಮಾಹಿತಿ ನೀಡಿದ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಕೀಲ್ ಅಹಮದ್, ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ ಅಂಗಮಾರಿ ರೋಗ ಕಂಡುಬಂದಿದೆ. ಆಲೂಗೆಡ್ಡೆ ಪ್ಯಾಕೇಜ್ ನೀಡಲಾಗುತ್ತಿದ್ದು ಪ್ರತಿ ಹೆಕ್ಟೇರ್‌ಗೆ 5 ಸಾವಿರ ರು. ನಿಗದಿ ಮಾಡಲಾಗಿದೆ. ಯೋಜನೆಯ ದುರ್ಬಳಕೆ ತಡೆಯಲು ಆರ್‌ಟಿಸಿ, ಆಲೂಗೆಡ್ಡೆ ಖರೀದಿಸಿದ ರಸೀದಿಯನ್ನು ಕಡ್ಡಾಯ ಮಾಡಲಾಗಿದೆ ಎಂದರು.
ಗೊಬ್ಬರ ಕೊರತೆ ಇಲ್ಲ: ಇದಕ್ಕೂ ಮುನ್ನ ಸಭೆಗೆ ಮಾಹಿತಿ ನೀಡಿದ ಜಂಟಿ ಕೃಷಿ ನಿರ್ದೇಶಕ ಬಿ. ಶಿವರಾಜು, ವಿಳಂಬವಾಗಿ ಬಂದ ಮಳೆಯಿಂದ ಬಿತ್ತನೆ ಕಾರ್ಯ ತಡವಾಗಿ ಪ್ರಾರಂಭವಾಗಿದ್ದು ಚುರುಕಿನಿಂದ ಮುಂದುವರಿದಿದೆ. ಅಲ್ಲದೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಯಾವುದೇ ಕೊರತೆ ಕಂಡುಬಂದಿಲ್ಲ ಎಂದರು.
ಜಿಲ್ಲೆಯಲ್ಲಿ ಸಾವಯವ ಕೃಷಿ ವಿಸ್ತರಣೆಗೆ ಆದ್ಯತೆ ನೀಡುವಂತೆ ಒತ್ತಾಯಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ನಂಜುಂಡಸ್ವಾಮಿ, ಗೊರೂರು ಮೀನು ಮರಿ ಅಭಿವೃದ್ಧಿ ಕೇಂದ್ರ ದುರಸ್ತಿಗಾಗಿ ರಾಜ್ಯದಿಂದ ಹೆಚ್ಚುವರಿ ಅನುದಾನ ಒದಗಿಸುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಅಧಿಕಾರಿಗಳಿಗೆ ಪತ್ರ ಬರೆದಿದ್ದು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುವಂತೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಸಸಿ ವಿತರಿಸಿ: ಅಧ್ಯಕ್ಷ ಶಿವಶಂಕರ ಕುಂಟೆ ಹಾಗೂ ಲಕ್ಷ್ಮಣಗೌಡ ಅವರು ನಾನಾ ಇಲಾಖೆಗಳ ಮೂಲಕ ಸಸಿಗಳ ವಿತರಣೆಗೆ ಇದು ಸಕಾಲವಾಗಿದ್ದು ತಕ್ಷಣದಿಂದಲೇ ಈ ಬಗ್ಗೆ ಕ್ರಮ ವಹಿಸುವಂತೆ ಒತ್ತಾಯಿಸಿದರು.
ಸಭೆಗೆ ಕೆಲವು ಅಧಿಕಾರಿಗಳು ಪೂರ್ವಾನುಮತಿ ಪಡೆಯದೆ ಗೈರು ಹಾಜರಾಗಿರುವ ಬಗ್ಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯು.ಪಿ.ಸಿಂಗ್ ಅಸಮಧಾನ ವ್ಯಕ್ತಿಪಡಿಸಿದರು.
ನಾನಾ ಇಲಾಖೆಗಳ ಮೂಲಕ ಲಭ್ಯವಿರುವ ಸೌಲಭ್ಯಗಳು ಹಾಗೂ ಅವುಗಳ ಗುರಿ ಮತ್ತು ಸಾಧನೆ ಬಗ್ಗೆ ಸಭೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಲಾಯಿತು.