ಸೋರುತಿಹುದು ಸರ್ಕಾರಿ ಕಚೇರಿ ಮಾಳಿಗೆ
ಕ.ಪ್ರ.ವಾರ್ತೆ, ಸಕಲೇಶಪುರ, ಜು. 22
ಮಳೆಗೆ ಸೋರುವ ಸರ್ಕಾರಿ ಕಟ್ಟಡಗಳಿಂದಾಗಿ ನೌಕರರು ಕೆಲಸ ನಿರ್ವಹಿಸಲು ಪರದಾಡುವಂತಾಗಿದೆ.
ಕಳೆದ ಒಂದು ವಾರ ದಿಂದ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣದ ಬಹುತೇಕ ಸರ್ಕಾರಿ ಕಟ್ಟಡಗಳು ಮಳೆ ನೀರಿನಿಂದ ಸೋರುತ್ತಿದ್ದು, ಕಚೇರಿಯಲ್ಲಿ ಕುಳಿತಲ್ಲಿ ಕೆಲಸ ಮಾಡಲು ಹಾಗೂ ಕಡತಗಳನ್ನು ರಕ್ಷಿಸಲು ನೌಕರರು ಸಮಸ್ಯೆ ಎದುರಿಸುತ್ತಿದ್ದಾರೆ.
ಕಡತ ರಕ್ಷಣೆ ಸಮಸ್ಯೆ: ಪಟ್ಟಣದ ಚೆಸ್ಕಾಂ, ತಾಲೂಕು ಕಚೇರಿ, ಸರ್ವೆ ಕಚೇರಿ, ನಾಡ ಕಚೇರಿ, ಜಿಲ್ಲಾ ಪಂಚಾಯ್ತಿ, ಲೋಕೋಪಯೋಗಿ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆಯ ಕಚೇರಿಗಳು ಮಳೆ ನೀರಿನಿಂದ ಸೋರುತ್ತಿವೆ. ವಿದ್ಯುತ್ ಇಲಾಖೆಯ ಕಟ್ಟಡ ಬಹುತೇಕ ಎಲ್ಲೆಡೆ ಸೋರುತ್ತಿರುವುದರಿಂದ ಕಡತ ಹಾಗೂ ಕಂಪ್ಯೂಟರ್‌ಗಳನ್ನು ನೀರಿನಿಂದ ರಕ್ಷಿಸಲು ಹರಸಾಹಸ ಪಡಬೇಕಾಗಿದೆ.
ಹೆಂಚಿನ ಕಟ್ಟಡದಲ್ಲಿರುವ ನಾಡ ಕಚೇರಿ ಕಿಟಕಿಯಿಂದ ಮಳೆ ನೀರು ಕಟ್ಟಡದ ಒಳ ಪ್ರವೇಶಿಸುತ್ತಿದ್ದರೆ, ಹೆಂಚಿನ ಮಧ್ಯೆ ಭಾಗದಿಂದ ಜಿನುಗುವ ಮಳೆ ನೀರಿನಿಂದ ಕಡತ ರಕ್ಷಿಸುವುದೇ ಸಾಹಸದ ಕೆಲಸವಾಗಿದೆ. ಉಪವಿಭಾಗಾಧಿಕಾರಿ ಕಚೇರಿಯಲ್ಲೂ ಇದೆ ಸ್ಥಿತಿ ಇದೆ. ಇಲ್ಲಿ ಕಡತಗಳನ್ನು ಇಟ್ಟಿರುವ ಸ್ಥಳ ಮಳೆ ನೀರಿನಿಂದ ಅವೃತವಾಗಿದೆ. ಎರಡಂತಸ್ತಿನ ಮಿನಿ ವಿಧಾನಸೌಧ ಸಹ ಸೋರುತ್ತಿದೆ.
ಆಸ್ಪತ್ರೆಯಲ್ಲೂ ಇದೇ ಸ್ಥಿತಿ: ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯ ಹೊಸಕಟ್ಟಡ ಸೋರುತ್ತಿದ್ದು, ಸೋರುವಿಕೆ ತಡೆಗಟ್ಟಲು ಕಟ್ಟಡದ ಮೇಲ್ಭಾಗಕ್ಕೆ ಆಳವಡಿಸಿದ್ದ ಶೀಟುಗಳು ಗಾಳಿ ಮಳೆಗೆ ಹಾರಿ ಹೋಗಿರುವುದರಿಂದ ಆಸ್ಪತ್ರೆ ಕಟ್ಟಡ ಸಂಪೂರ್ಣ ಸೋರುತ್ತಿದೆ. ಸರ್ಕಾರಿ ಕಟ್ಟಡಗಳ ಸ್ಥಿತಿ ಇದಾದರೆ, ಸರ್ಕಾರಿ ನೌಕರರು ವಾಸಿಸುವ ನಿವಾಸಗಳ ಸ್ಥಿತಿ ಸಹ ಅಧೋಗತಿಗೀಡಾಗಿವೆ.
ಉಪ ವಿಭಾಗಾಧಿಕಾರಿಗಳ ನಿವಾಸ ಮಳೆ ನೀರಿನಿಂದ ಸೋರುತ್ತಿರುವುದರಿಂದ ಕಟ್ಟಡದ ಚಾವಣಿಗೆ ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಲಾಗಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ.