ದೌರ್ಜನ್ಯ ಪ್ರಕರಣ ಹೆಚ್ಚುತ್ತಿದ್ದರೂ ದನಿ ಎತ್ತದ ಸಚಿವೆ
ಬೇಲೂರು: ರಾಜ್ಯ ಸರ್ಕಾರದ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾಗಿರುವ ಉಮಾಶ್ರೀಯವರು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಕಂಡರೂ ಕಾಣದಂತಿರುವುದು ವಿಪರ್ಯಾಸವಾಗಿದೆ. ತಕ್ಷಣವೇ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯಾಲಯದ ಕಾರ್ಯದರ್ಶಿ ಎಂ.ಸಿ.ಲತಾ ಒತ್ತಾಯಿಸಿದರು.
ಪಟ್ಟಣದ ಬಿಜೆಪಿ ಕ:ಕೇರಿಯಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಮಹಿಳಾ ಮೋರ್ಚ ಮಂಡಲ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಿಳೆಯರ ಮೇಲೆ ಪ್ರತಿನಿತ್ಯ ದೌರ್ಜನ್ಯದಂತಹ ಪ್ರಕರಣಗಳು ನಡೆಯುತ್ತಿದ್ದರೂ, ಇಂತಹ ಘಟನೆಗಳ ಬಗ್ಗೆ ಸದನದಲ್ಲಿ ದನಿ ಎತ್ತದೆ ಮಹಿಳಾ ವಿರೋಧಿಯಾಗಿ ಉಮಾಶ್ರೀಯವರು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ, ತಕ್ಷಣವೇ ಉಮಾಶ್ರೀ ಯವರು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು.
ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಕಾರ್ಯ ಕಾರಿಣಿಯ ಸದಸ್ಯೆ ಅನ್ನಪೂರ್ಣ, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ವಿಜಯಲಕ್ಷ್ಮಿ, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಮಾತನಾಡಿದರು. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸುಶೀಲಾ ಅಣ್ಣಪ್ಪ, ತಾ.ಪಂ.ಸದಸ್ಯೆ ಶಾಂತಮ್ಮ, ಶೈಲಾ, ಅನಿತಾ, ಉಷಾ ಹಾಗೂ ಇತರರು ಇದ್ದರು.