ರಸಗೊಬ್ಬರ, ಬಿತ್ತನೆ ಬೀಜ ಮಳಿಗೆಗಳ ತಪಾಸಣೆ
ಹಾಸನ: ಜಿಲ್ಲೆಯ ರೈತರಿಗೆ ಮುಂಗಾರು ಹಂಗಾಮಿನಲ್ಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕೀಟನಾಶಕಗಳ ಗುಣ ಮಟ್ಟದ ಬಗ್ಗೆ ಸೂಕ್ತ ತಪಾಸಣೆ ಹಾಗೂ
ಅಕ್ರಮ ದಾಸ್ತಾನು ತಡೆಗಟ್ಟಲು ಕೃಷಿ ನಿರ್ದೇಶನಾಲಯದ ಮಾರ್ಗದರ್ಶನದಂತೆ ಕೆ. ನಾಗರಾಜಯ್ಯ ಮೊ.7259005411 ನೇತೃತ್ವದಲ್ಲಿ ವಿಚಕ್ಷಣ ತಂಡ ರಚಿಸಲಾಗಿದೆ.
ಸದರಿ ತಂಡ ಈಗಾಗಲೇ ಜಿಲ್ಲೆಯಾದ್ಯಂತ ಸಂಚರಿಸಿ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿ ನಿಯಮಾವಳಿಗಳನ್ನು ಉಲ್ಲಂಘಿಸಿದವರಿಗೆ ನೋಟಿಸ್ ಜಾರಿ ಮಾಡಿ ಹಲವು ಪ್ರಕರಣಗಳಲ್ಲಿ ಮಾರಾಟ ತಡೆಯಾಜ್ಞೆ ನೀಡಿದೆ.
ಮಾರಾಟಕ್ಕೆ ತಡೆ: ಕೃಷಿ ವಿಚಕ್ಷಣ ತಂಡ 29 ರಸಗೊಬ್ಬರ ಮಾರಾಟ ಮಳಿಗೆಗಳು, 27 ಕೀಟನಾಶಕ ಮಾರಾಟ ಮಳಿಗೆಗಳು ಮತ್ತು 14 ಬಿತ್ತನೆ ಬೀಜ ಮಾರಾಟ ಮಳಿಗೆಗಳನ್ನು ತಪಾಸಣೆ ಮಾಡಿ ಮಾರಾಟಕ್ಕೆ ತಡೆಯಾಜ್ಞೆ ನೀಡಿದೆ. ಮುಕ್ತ ಮಾರುಕಟ್ಟೆಯಲ್ಲಿ ರೈತರಿಗೆ ಸರಬರಾಜು ಮಾಡುವ ಕೃಷಿ ಪರಿಕರಗಳ ಗುಣ ಮಟ್ಟವನ್ನು ಖಾತ್ರಿ ಪಡಿಸಿಕೊಳ್ಳಲು ಇಲಾಖೆ ಪರಿವೀಕ್ಷಕರು ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತಿದೆ. ಹಲವು ಪ್ರಕರಣಗಳಲ್ಲಿ ಉತ್ತಮ ಗುಣ ಮಟ್ಟದಲ್ಲವೆಂದು ವರದಿಯಾದ ಹಿನ್ನೆಲೆಯಲ್ಲಿ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ರೈತರು ಕೃಷಿ ಪರಿಕರಗಳ ಗುಣಮಟ್ಟ, ಅಕ್ರಮ ದಾಸ್ತಾನು ಹಾಗೂ ಅಧಿಕ ಬೆಲೆಗಳಲ್ಲಿ ಮಾರಾಟ ಮಾಡುವ ಪ್ರಕರಣಗಳು ಕಂಡುಬಂದಲ್ಲಿ ಪತ್ರ ಮುಖೇನ ಅಥವಾ ದೂರವಾಣಿ ಮೂಲಕ ದೂರನ್ನು ಕೆ. ನಾಗರಾಜಯ್ಯ ಮೊ.72590 05411 ಸಹಾಯಕ ಕೃಷಿ ನಿರ್ದೇಶಕರು ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ದಾಖಲಿಸಬಹುದೆಂದು ಜಂಟಿ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.