ಆಯುಕ್ತರಿಂದಲೇ ಹಣ ದುರುಪಯೋಗ: ಆರೋಪ
ಕನ್ನಡಪ್ರಭ ವಾರ್ತೆ, ಹಾಸನ. ಜು. 25
ನಗರಸಭೆ ಆಯುಕ್ತರು ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿ ಸಾರ್ವಜನಿಕರ ಹಣವನ್ನು ದುರುಪಯೋಗ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಗರಸಭೆಯ ಜೆಡಿಎಸ್ ಸದಸ್ಯರು, ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿ ಆಯುಕ್ತರ ವಿರುದ್ಧ ಘೋಷಣೆ ಕೂಗಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಆಯುಕ್ತ ವಿ.ಎಚ್. ಕೃಷ್ಣಮೂರ್ತಿ ಹಲವಾರು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಈ ಹಿಂದೆ ದಾಂಡೇಲಿ, ಮಂಡ್ಯ, ಚಾಮರಾಜನಗರ ಮತ್ತು ಚಿಕ್ಕಮಗಳೂರಿನ ನಗರಸಭೆ ಆಯುಕ್ತರಾಗಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಹಲವಾರು ಅಕ್ರಮಗಳಲ್ಲಿ ಭಾಗಿಯಾಗಿದ್ದರು. ಜಾತಿ ನಿಂದನೆ ದೂರು ಕೊಡುವುದಾಗಿ ಬೆದರಿಕೆ ಹಾಕುತ್ತಾ ಜಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಜು. 23ರಂದು ಬೆಳಗ್ಗೆ ನಗರದ ಕಸ ವಿಲೇವಾರಿ ಮತ್ತು ನೀರು ಸರಬರಾಜಿನಲ್ಲಿ ಉಂಟಾಗಿರುವ ಸಮಸ್ಯೆಯ ಬಗ್ಗೆ ನಗರಸಭೆ ಅಧ್ಯಕ್ಷರ ಕೊಠಡಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಗುತ್ತಿಗೆದಾರರು, ನೌಕರ ವರ್ಗದವರು, ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷ ಹಾಗೂ ಸದಸ್ಯರು ಸಭೆ ಸೇರಿದ ಸಂದರ್ಭದಲ್ಲಿ ಆಯುಕ್ತರನ್ನು ಅಧ್ಯಕ್ಷರು ಆಹ್ವಾನಿಸಿದ್ದರು. ಆಗ ಪೌರಕಾರ್ಮಿಕರಿಗೆ ವೇತನ, ಇಎಫ್ಐ ಮತ್ತು ಪಿಎಫ್ ಹಣ ನೀಡುವಂತೆ ಒತ್ತಾಯ ಮಾಡಲಾಗಿತ್ತು.
ಅದನ್ನು ಬಿಟ್ಟು ಆಯುಕ್ತರಿಗೆ ಜಾತಿ ನಿಂದನೆಯಾಗಲಿ, ಯಾವುದೇ ಬಿಲ್ ಅಥವಾ ಕಡತಗಳಿಗೆ ಸಹಿ ಮಾಡುವಂತೆ ಒತ್ತಡ ಹಾಕಲಿಲ್ಲ. ಹಲ್ಲೆ ನಡೆಸುವಂತಹ ಪ್ರಯತ್ನವಾಗಲೀ, ಅವಾಚ್ಯ ಪದಗಳ ಬಳಕೆಯಾಗಲಿ ಮಾಡಿಲ್ಲ ಹಾಗೂ ಅವರನ್ನು ಕೂಡಿ ಹಾಕುವಂತಹ ಪ್ರಯತ್ನವನ್ನು ಸಹ ಮಾಡಿಲ್ಲ ಎಂದರು.
ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ: ನಗರಸಭೆ ಆಯುಕ್ತರು ಅಧ್ಯಕ್ಷರ ಮಾತಿಗೆ ಬೆಲೆ ನೀಡುವುದಿಲ್ಲ. ಸ್ವಚ್ಛತೆ ಹಾಗೂ ನೀರಿನ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಕೊಠಡಿಗೆ ಬರುವಂತೆ ಮೂರು ಬಾರಿ ಹೇಳಿದರೂ, ಅವರು ಬಾರದೇ ಅವಮಾನ ಮಾಡಿದ್ದಾರೆ. ಈ ಮೂಲಕ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯ ಅನಿಲ್ ಕುಮಾರ್: ಪೌರಕಾರ್ಮಿಕರು ವೇತನ ನೀಡಿಲ್ಲದ ಪರಿಣಾಮ ಅವರು ಧರಣಿ ಮಾಡುತ್ತಿದ್ದರಿಂದ ಅವರಿಗೆ ವೇತನ ಹಾಗೂ ಪಿಎಫ್ ಹಣ ನೀಡುವಂತೆ ಆಯುಕ್ತರಿಗೆ ಕೇಳಿದೆವು. ಗುತ್ತಿಗೆದಾರರಿಗೂ ಕೇಳಿದರೆ ಅವರು ಕಷ್ಟ ಆಗುತ್ತಿದ್ದೆ ಎಂದಿದ್ದಾರೆ. ಏಕೆಂದರೆ ಶೇ.5ರಷ್ಟು ಹಣವನ್ನು ಆಯುಕ್ತರಿಗೆ ಹಾಗೂ ಅಧಿಕಾರಿಗಳಿಗೆ ಹಣವನ್ನು ನೀಡಬೇಕಾಗಿದೆ ಎಂದಿದ್ದಾರೆ. ಆಯುಕ್ತರಿಗೆ ಪ್ರತಿತಿಂಗಳು ರು. 1 ಲಕ್ಷವನ್ನು ಸ್ವಚ್ಛತೆ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ನೀಡುತ್ತಿದ್ದಾರೆ.