ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪ್ರತಿಭಟಿಸಲು ಬಂದವರೇ ಕಚ್ಚಾಡಿಕೊಂಡರು

Mainashree
Updated On : 25 Jul 2014, 11:19 am

ಕನ್ನಡಪ್ರಭ ವಾರ್ತೆ, ಹಾಸನ. ಜು. 25
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಶುಕ್ರವಾರ ಪ್ರತಿಭಟನೆಗೆಂದು ಬಂದ ಬಿಜೆಪಿ ಮತ್ತು ಜೆಡಿಎಸ್ ಮುಖಂಡರುಗಳೇ ಪರಸ್ಪರ ಕಚ್ಚಾಡಿದ ಪ್ರಸಂಗ ನಡೆಯಿತು.
 ನಗರಸಭೆ ಆಯುಕ್ತರು ಮತ್ತು ಅಧ್ಯಕ್ಷರ ನಡುವೆ ನಡೆಯುತ್ತಿರುವ ಜಗಳವನ್ನು ಖಂಡಿಸಲು  ಜಿಲ್ಲಾ ಬಿಜೆಪಿ ಕಾರ್ಯಕರ್ತರು ಡಿಸಿ ಕಚೇರಿ ಆವರಣಕ್ಕೆ ಬಂದು ಧರಣಿ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ  ಬಂದ ನಗರಸಭೆ ಅಧ್ಯಕ್ಷೆ ಶ್ರಿವಿದ್ಯಾ ಅವರಿಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ದಿಗ್ಬಂಧನ ಹಾಕಲು ಬಿಜೆಪಿ ಕಾರ್ಯಕರ್ತರು ಮುಂದಾದರು. ಈ ಸಂದರ್ಭದಲ್ಲಿ ಜೆಡಿಎಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಸಿದ ವಿಲಕ್ಷಣ ಘಟನೆಯೂ ನಡೆಯಿತು.
ಮಾತಿನ ಚಕಮಕಿ: ಬಿಜೆಪಿ ಕಾರ್ಯಕರ್ತರು ಗೂಂಡಾಗಳಂತೆ ವರ್ತಿಸುತ್ತಿದ್ದಾರೆ ಎಂದು ಘೋಷಣೆಗಳನ್ನು  ನಗರಸಭೆಯ ಜೆಡಿಎಸ್ ಸದಸ್ಯರು, ಕಾರ್ಯಕರ್ತರು ಕೂಗಿದರಯಿದನ್ನು ವಿರೋಧಿಸಿದ ಬಿಜೆಪಿ ಕಾರ್ಯಕರ್ತರು ಹಾಗೂ ಜೆಡಿಎಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು, ಕೈಕೈ ಮಿಲಾಯಿಸಿ ತಳ್ಳಾಟ ನಡೆಯಿತು.
 ಜೆಡಿಎಸ್ ಸದಸ್ಯರು ಗೂಂಡಾವರ್ತನೆ ಮಾಡುತ್ತಿದ್ದಾರೆ. ಜೆಡಿಎಸ್ ಸದಸ್ಯರ ಆಡಳಿತ ವೈಖರಿಯಿಂದ ನಗರಸಭೆ ಆಡಳಿತ ಹದಗೆಟ್ಟಿದೆ. ಕೂಡಲೇ ನಗರಸಭೆಯನ್ನು ಸೂಪರ್‌ಸೀಡ್ ಮಾಡಬೇಕು ಎಂದು ಆಗ್ರಹಿಸಿದರು.  ಈ ಸಂದರ್ಭದಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಬಿಗುವಿನ ವಾತಾವರಣವನ್ನು ತಿಳಿಗೊಳಿಸಿದರು.  
ಬಿಜೆಪಿ ಪ್ರತಿಭಟನೆ: ನಗರಸಭೆಯ ಪೌರಾಯುಕ್ತರನ್ನು ಕೂಡಿ ಹಾಕಿದ ನಗರಸಭಾ ಸದಸ್ಯರನ್ನು ಬಂಧಿಸಬೇಕು ಹಾಗೂ ನಗರಸಭೆಯನ್ನು ಸೂಪರ್‌ಸೀಡ್ ಮಾಡುವಂತೆ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು.
 ನಗರಸಭೆಯಲ್ಲಿ ಅವ್ಯವಹಾರಗಳು ಹೆಚ್ಚಾಗಿದ್ದು, ನಗರಸಭೆ ಆಡಳಿತ ಮಾಡುತ್ತಿರುವ ಅಧ್ಯಕ್ಷೆ, ಉಪಾಧ್ಯಕ್ಷ ಹಾಗೂ ಸದಸ್ಯರು ಇದರಲ್ಲಿ ಭಾಗಿಯಾಗಿದ್ದಾರೆ. ನಗರಸಭೆಯಲ್ಲಿ ಪ್ರಕ್ಯೂರ್‌ಮೆಂಟ್ ಮೂಲಕ ಟೆಂಡರ್ ಕರೆಯದೆ ಸಾರ್ವಜನಿಕರ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟೆಂಡರ್ ಪ್ರಕಟಿಸಿಲ್ಲ: ಹಾಸನ ನಗರದ 9 ಪಾರ್ಕ್‌ಗಳಿಗೆ ಮಕ್ಕಳ ಆಟದ ಸಾಮಾನು ಅಳವಡಿಸಲು ಒಂದು ಕೋಟಿ ರು.ಗೂ ಹೆಚ್ಚು ಹಣಕ್ಕೆ ಟೆಂಡರ್ ನೀಡಿದ್ದು ಇದು ರಾಜ್ಯದ ಯಾವ ಪತ್ರಿಕೆಗಳಲ್ಲಿ ಪ್ರಕಟವಾಗಿಲ್ಲ ಎಂದು ಆರೋಪಿಸಿದರು.
 ನಗರಸಭೆಗೆ ಸೇರಿರುವ ಸತ್ಯಮಂಗಲ ಪಂಚಾಯ್ತಿಗೆ ಸೇರುವ ಒಂದು ಪಾರ್ಕಿಗೆ ಆಟದ ಸಾಮಾನುಗಳನ್ನು ಅಳವಡಿಸಿದ್ದಾರೆ ಮತ್ತು ಟೆಂಡರ್ ಅನ್ನು ಬೆಂಗಳೂರಿನ ಯಾವುದೋ ಗುತ್ತಿಗೆದಾರನಿಗೆ ಕೊಡಿಸಿದ್ದಾರೆ. ಹೀಗಾಗಿ ಈ ಟೆಂಡರ್ ಹಣ ಲೂಟಿ ಮಾಡಲು ಮಾಡಿಕೊಂಡಿದ್ದಾರೆ ಎಂದರು.
ಬಿಲ್ ಪಾಸ್‌ಗೆ ಬಲಾತ್ಕಾರ: ಈ ಕಾಮಗಾರಿ ಬಿಲ್‌ಗೆ ಸಹಿ ಹಾಕದ ಪೌರಾಯುಕ್ತರನ್ನು ನಗರಸಭಾ ಸದಸ್ಯರಾದ ಡಾ.ಅನಿಲ್ ಕುಮಾರ್ ಮತ್ತು ಉಪಾಧ್ಯಕ್ಷ ಇರ್ಷಾದ್ ಪಾಷ ಮತ್ತು ಏಜಾಜ್ ಪಾಷಾ ಇವರು ಅಧ್ಯಕ್ಷರ ಕೊಠಡಿಯಲ್ಲಿ ಆಯುಕ್ತರನ್ನು ಕೂಡಿ ಹಾಕಿ ಬಿಲ್‌ಗೆ ಸಹಿ ಹಾಕುವಂತಹ ತಾಕೀತು ಮಾಡಿದ್ದಾರೆ ಎಂದು ದೂರಿದರು.  ಆದ್ದರಿಂದ ಕೂಡಲೇ ನಗರಸಭೆ ಜೆಡಿಎಸ್ ಸದಸ್ಯರನ್ನು ಬಂಧಿಸಬೇಕು ಹಾಗೂ ನಗರಸಭೆಯನ್ನು ಸೂಪರ್‌ಸೀಡ್ ಮಾಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ಪ್ರಧಾನ ಕಾರ್ಯದರ್ಶಿ ಡಿ.ಪ್ರಸನ್ನಕುಮಾರ್, ಅಗಿಲೆ ಯೋಗೇಶ್, ಸುರೇಶ್, ಮಂಜುನಾಥ್ ಮೋರೆ, ಮಂಜುನಾಥ್ ಶರ್ಮಾ, ಕುಮಾರಸ್ವಾಮಿ ಡಿ.ಕೆ., ಪುನೀತ್, ಐನೆಟ್ ವಿಜಿ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement