ವಾಣಿಜ್ಯ ಮಳಿಗೆಗಳಿಗೆ ಬೀಗ
ಬೇಲೂರು: ಪಟ್ಟಣದ ವಾಣಿಜ್ಯ ಮಳಿಗೆಗಳಲ್ಲಿ ಬಾಡಿಗೆ ಬಾಕಿ ಉಳಿಸಿಕೊಂಡಿರುವ ಅಂಗಡಿಗಳಿಗೆ ಪುರಸಭೆಯ ಅಧಿಕಾರಿಗಳು ಶುಕ್ರವಾರ ಸಂಜೆ ಬೀಗವನ್ನು ಹಾಕಿದರು. ಈ ಸಂದರ್ಭದಲ್ಲಿ ವ್ಯಾಪಾರಸ್ಥರು ಪ್ರತಿರೋಧ ವ್ಯಕ್ತಪಡಿಸಿದರು.
ಮಳಿಗೆಯ ಬಾಡಿಗೆದಾರ ಜಯಂತ್ ಮಾತನಾಡಿ, ನಮಗೆ ಯಾವುದೇ ರೀತಿಯ ಸೂಚನೆ ಹಾಗೂ ನೋಟಿಸ್ ನೀಡದೆ ಏಕಾಏಕಿ ಬೀಗ ಹಾಕಿದ್ದಾರೆ ಎಂದು ಆರೋಪಿಸಿದರು.
ಸೌಲಭ್ಯ ಕಲ್ಪಿಸಿಲ್ಲ: ಐಡಿಎಸ್ ಎಂಟಿ ವಾಣಿಜ್ಯ ಸಂಕೀರ್ಣದಲ್ಲಿ ಯಾವುದೇ ರೀತಿಯ ಮೂಲಭೂತ ಸೌಕರ್ಯವನ್ನು ಕಲ್ಪಸಿಲ್ಲ. ಶೌಚಾಲಯ ಗಬ್ಬು ನಾರುತ್ತಿದ್ದು ಮಲೀನವಾದ ವಾತಾವರಣ ನಿರ್ಮಾಣವಾಗಿದೆ. ಸರಿಯಾದ ವಿದ್ಯುತ್ ದೀಪಗಳನ್ನು ಅಳವಡಿಸದ ಕಾರಣ ರಾತ್ರಿ ವೇಳೆ ಮಹಿಳೆಯರು ಸಂಕೀರ್ಣದೊಳಗೆ ಬರಲು ಹಿಂಜರಿಯುತ್ತಾರೆ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು. ಈ ಸಂದರ್ಭದಲ್ಲಿ ಮಖ್ಯಾಧಿಕಾರಿ ಬಸವರಾಜ್ ಮಾತನಾಡಿ, ವಸೂಲಾತಿಗೆ ಬಂದಾಗಲೆಲ್ಲಾ ಇಲ್ಲಸಲ್ಲದ ಕಾರಣಗಳನ್ನು ಹೇಳಿ ಹಲವಾರು ತಿಂಗಳುಗಳ ಬಾಕಿಯನ್ನು ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ದಿನ ಮಳಿಗೆಗೆ ಬೀಗವನ್ನು ಹಾಕಲಾಗುತ್ತಿದೆ ಎಂದರು. ಪುರಸಭೆ ಸಿಬ್ಬಂದಿ ಇದ್ದರು.