ನೀರಾವರಿ ಯೋಜನೆಗೆ ನಿರ್ಲಕ್ಷ್ಯ
ಚನ್ನರಾಯಪಟ್ಟಣ: ರಾಜ್ಯ ಮತ್ತು ಕೇಂದ್ರ ಸರ್ಕಾರ ನೀರಾವರಿ ಯೋಜನೆಗಳನ್ನು ಕೈಗೊಳ್ಳುವುದರಲ್ಲಿ ನಿರ್ಲಕ್ಷ್ಯ ತೋರಿರುವುದರಿಂದ ರೈತರು ಬರಭೂಮಿಯನ್ನು ನಂಬಿ ಜೀವನ ಸಾಗಿಸಬೇಕಾಗಿದೆ ಎಂದು ರೈತ ಸಂಘದ ಮುಖಂಡ ಪುಟ್ಟಣ್ಣಯ್ಯ ವಿಷಾದಿಸಿದರು.
ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ರೈತ ಸಂಘ ತಾಲೂಕು ಘಟಕ ಏರ್ಪಡಿಸಿದ್ದ ರೈತ ವಿರಾಟ ದರ್ಶನ ಸಮಾವೇಶದಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಅಧಿಕಾರಕ್ಕೆ ಬರಲು ರೈತರು ಬೇಕು ಆದರೆ ಆನಂತರದಲ್ಲಿ ರೈತರನ್ನು ಮರೆಯುವ ಪ್ರವೃತ್ತಿಯಿಂದ ರೈತರು ಬಡವರಾಗಿಯೇ ಉಳಿದಿದ್ದಾರೆ ಎಂದು ತಿಳಿಸಿದರು.
ಉದ್ಯಮಿಗಳೇ ಮುಖ್ಯ: ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ಪ್ರಮಾಣವಚನಕ್ಕೆ ಯಾವ ರೈತರನ್ನು ಆಹ್ವಾನಿಸಲಿಲ್ಲ. ಅವರಿಗೆ ರೈತರು ಬೇಡ ಹಣ ನೀಡುವ ಉದ್ಯಮಿಗಳು ಅವರಿಗೆ ಅಗತ್ಯವಿರುವುದರಿಂದ ಅವರನ್ನು ಆಹ್ವಾನಿಸಿದ್ದರು. ರಾಜ್ಯದಲ್ಲಿನ ಸಿದ್ದರಾಮಯ್ಯ ಅವರ ಸರ್ಕಾರ ಕೂಡ ರೈತರನ್ನು ಮರೆತು ಯಾವುದೇ ಸಹಾಯಸ್ತ ನೀಡುತ್ತಿಲ್ಲ ಎಂದು ಆರೋಪಿಸಿದರು.
ಸ್ವಾತಂತ್ರ್ಯ ಬಂದ ನಂತರ ಸರ್ಕಾರಿ ನೌಕರರಿಗೆ ಶೇ.300ರಷ್ಟು ವೇತನದಲ್ಲಿ ಹೆಚ್ಚಳವಾಗಿದೆ. ಆದರೆ ರೈತರು ಬೆಳೆದ ಬೆಳೆಗಳು ಶೇ.50ರಷ್ಟಾದರೂ ಹೆಚ್ಚಾಗಿಲ್ಲ. ಇದಕ್ಕೆ ರೈತರು ಒಗ್ಗಟ್ಟಾಗಿ ಹೋರಾಟ ಮಾಡದಿರುವುದೇ ಕಾರಣವಾಗಿದೆ ಎಂದು ತಿಳಿಸಿದರು.
ಆ. 3ರಂದು ಸಭೆ: ಚನ್ನರಾಯಪಟ್ಟಣದಲ್ಲಿ ನೆನೆಗುದಿಗೆ ಬಿದ್ದಿರುವ ಏತ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಲು ಆ.3ರಂದು ಬೆಂಗಳೂರಿನಲ್ಲಿ ಸಭೆ ಕರೆದಿದ್ದು, ರೈತ ಮುಖಂಡರುಗಳು ಸೇರಿ ನೀರಾವರಿ ಸಚಿವರು ಹಾಗೂ ಕಾರ್ಯದರ್ಶಿಗಳ ಜತೆ ಚರ್ಚಿಸಿ ಆನಂತರದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಯೋಜನೆ ಅನುಷ್ಠಾನಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ತಾಲೂಕಿನ ಏತ ನೀರಾವರಿ ಯೋಜನೆಗಳಿಗೆ ಮಂಜೂರಾತಿ ನೀಡಿಸುವುದು ತಮ್ಮ ಹೋರಾಟವಾಗಿದ್ದು, ಹೇಮಾವತಿ ನೀರು ತಾಲೂಕಿನ ರೈತರು ಬಳಕೆ ಮಾಡಿಕೊಂಡು ರೈತರ ಮೊಗದಲ್ಲಿ ನಗು ಕಾಣಿಸುವುದು ತಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು.
ವಂಶಪಾರಂಪರ್ಯ ಕೃಷಿ: ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷೆ ಚುಕ್ಕಿನಂಜುಂಡಸ್ವಾಮಿ ಮಾತನಾಡಿ, ಕೃಷಿಯಲ್ಲಿ ನೆಮ್ಮದಿ ಕಾಣದ ರೈತ ಅದನ್ನು ಮರೆಯುವ ಯತ್ನ ನಡೆಸುತ್ತಿರುವುದು ವಿಷಾದನಿಯ. ವೈಜ್ಞಾನಿಕವಾಗಿ ಕೃಷಿಯನ್ನು ಕೈಗೊಂಡು ಅದು ವಂಶಪಾರಂಪರ್ಯವಾಗಿ ನಡೆಯಬೇಕು ಎಂದು ತಿಳಿಸಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿ ಪಾಟೀಲ್, ರಾಜ್ಯ ಕಾರ್ಯಾಧ್ಯಕ್ಷ ಕೆ.ಟಿ ಗಂಗಾಧರ್, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಂದಿನಿ ಜಯರಾಂ, ಜಿಲ್ಲಾ ಸಂಚಾಲಕ ದೊಡ್ಡೇರಿ ಶ್ರೀಕಂಠ, ತಾಲೂಕು ಅಧ್ಯಕ್ಷ ಸತ್ತಿಗೌಡ, ಕಾರ್ಯಾಧ್ಯಕ್ಷ ಹರೀಶ್ ಹಾಗೂ ಇತರರು ಇದ್ದರು.