ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನೇಮಕದಲ್ಲಿ ಅವ್ಯವಹಾರ; ತನಿಖೆಗೆ ಆಗ್ರಹ

Mainashree
Updated On : 26 Jul 2014, 10:01 am

ಹಾಸನ: ಬೇಲೂರು ತಾಲೂಕಿನ ನಾರ್ವೆಪೇಟೆ ಗ್ರಾಮಪಂಚಾಯ್ತಿ ಬಿಲ್ ಕಲೆಕ್ಟರ್ (ವಸೂಲಿಗಾರ) ಹುದ್ದೆ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದ್ದು, ತನಿಖೆ ನಡೆಸುವಂತೆ ಎಂದು ಶ್ರೀರಾಮಸೇನೆ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಜಾನಕೆರೆ ಹೇಮಂತ್ ಮಾತನಾಡಿ, ನಾರ್ವೆಪೇಟೆ ಗ್ರಾಮ ಪಂಚಾಯ್ತಿಯಲ್ಲಿ ನಡೆದಂತಹ ಕರ ವಸೂಲಿಗಾರರ ಆಯ್ಕೆಯಲ್ಲಿ ಭಾರಿ ತಾರತಮ್ಯ ನಡೆದಿದೆ. ನೇರವಾಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಗುರುಶಾಂತ, ಪಿಡಿಓ ಕೊಮುರಯ್ಯ ಮತ್ತು ಕಾರ್ಯದರ್ಶಿ ವೀರೇಶ್ ಹಾಗೂ ಕೆಲವು ಸದಸ್ಯರು ಸೇರಿ ಸುಮಾರು 2ರಿಂದ 3ಲಕ್ಷ ಹಣವನ್ನು ಪಡೆದು,ಅರ್ಹರಲ್ಲದ ಅಭ್ಯರ್ಥಿಗೆ ಹುದ್ದೆಯನ್ನು ನೀಡಿದ್ದಾರೆ ಎಂದು ಆರೋಪಿಸಿದರು.
ಆಯ್ಕೆ: ಈ ಹುದ್ದೆಗೆ 12 ಮಂದಿ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಕೇವಲ 52 ಅಂಕಗಳನ್ನು ಹೊಂದಿರುವ ನಾರಾಯಣ ಅವರಿಗೆ ದಾಖಲಾತಿಗಳನ್ನು ಪರಿಶೀಲಿಸದೇ ಏಕಾಏಕಿ ಆಯ್ಕೆ ಮಾಡಿದ್ದಾರೆ. 57ರಷ್ಟು ಅಂಕವನ್ನು ಪಡೆದಂತಹ ಅಭ್ಯರ್ಥಿಗಳು ಇದ್ದರೂ, ಅವರನ್ನು ಪರಿಗಣಿಸದೆ ಕಡಿಮೆ ಅಂಕವನ್ನು ಪಡೆದಿರುವವರಿಗೆ ಹುದ್ದೆಯನ್ನು ನೀಡಿದ್ದಾರೆ ಎಂದು ದೂರಿದರು.
ಶಿವಕುಮಾರ್ ಎಂಬ ವ್ಯಕ್ತಿ ವಾಟರ್‌ಮನ್ ಆಗಿ ಗ್ರಾಮ ಪಂಚಾಯ್ತಿಯಲ್ಲಿ ಸುಮಾರು 7ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಬಿಲ್ ಕಲೆಕ್ಟರ್ ಹುದ್ದೆ ಆಕಾಂಕ್ಷಿಯಾಗಿದ್ದರು. ಈ ರೀತಿಯಾಗಿ ಅನೇಕ ಮಂದಿ ಅರ್ಜಿಯನ್ನು ಸಲ್ಲಿಸಿದ್ದರೂ, ಅವರನ್ನು ಪರಿಗಣಿಸದೇ ಅರ್ಹರಲ್ಲದವರಿಗೆ ಹುದ್ದೆಯನ್ನು ನೀಡಿದ್ದು, ಕೂಡಲೇ ಈ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಅರುಣ್ ಕುಮಾರ್, ಪಾಲಾಕ್ಷ, ರವಿಕುಮಾರ್, ಲಿಖಿತ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement