ಅತ್ಯಾಚಾರ ತಡೆಗೆ ಜನರನ್ನು ಮಾನಸಿಕವಾಗಿ ಪ್ರಬುದ್ಧಗೊಳಿಸಿ
ಕ.ಪ್ರ.ವಾರ್ತೆ ್ಣ ಹಾಸನ ್ಣ ಜು.27
ಅತ್ಯಾಚಾರಿಗಳನ್ನು ಗುಂಡಿಕ್ಕಿ ಕೊಲ್ಲುವುದರಿಂದ ಅಥವಾ ಗಲ್ಲಿಗೇರಿಸವುದರಿಂದ ದೌರ್ಜನ್ಯವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಜನರನ್ನು ಮಾನಸಿಕವಾಗಿ ಪ್ರಬುದ್ಧಗೊಳಿಸಿ ಜನತಾ ಚಳುವಳಿ ನಡೆಸಿದರೆ ಮಾತ್ರ ದೌರ್ಜನ್ಯ ಮುಕ್ತ ಸಮಾಜ ನಿರ್ಮಿಸಬಹುದು ಎಂದು ಅಖಿಲಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಗೀತಾ ಹೇಳಿದರು.
ನಗರದ ಕುರುಹಿನ ಕಲ್ಯಾಣ ಮಂಟಪದಲ್ಲಿ ಭಾನುವಾರ ಎಸ್‌ಎಫ್‌ಐ, ಡಿವೈಎಫ್‌ಐ, ಸಿಐಟಿಯು, ಬಿಜಿವಿಎಸ್ ಸಮತಾ, ಕೆಪಿಆರ್‌ಎಸ್ ಜಂಟಿಯಾಗಿ ಆಯೋಜಿಸಿದ್ದ ಮಹಿಳಾ ದೌರ್ಜನ್ಯದ ವಿರುದ್ಧ ನಾವು-ನೀವು ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದರು.
ಆಂದೋಲನ ಅಗತ್ಯ: ಅತ್ಯಾಚಾರಿಗಳಿಗೆ ಈ ನಾಡಿನ ನ್ಯಾಯಾಲಯಗಳಾಗಲಿ, ಶಾಸಕಾಂಗ ಕಾರ್ಯಾಂಗವಾಗಲಿ ಇವರಾರಿಗೂ ಶಿಕ್ಷೆ ವಿಧಿಸಲಾಗಿಲ್ಲ. ಈ ಪ್ರಕರಣಗಳಲ್ಲಿ ಬಹುತೇಕ ಪ್ರಭಾವಿ ವ್ಯಕ್ತಗಳ ಕೈವಾಡವಿರುವುದು ಬಹಿರಂಗವಾಗಿದೆ. ಹಾಗಾಗಿ ಸಂಘಟನೆಗಳು, ಮಹಿಳಾ ಪರ ಸಂಘಟನೆಗಳು ಸಾಮಾನ್ಯ ವೇದಿಕೆಯಡಿ ಮಹಿಳಾ ದೌರ್ಜನ್ಯ ತಡೆಗೆ ಆಂದೋಲನ ನಡೆಸಬೇಕಿದೆ ಎಂದರು.
ಕಾರ್ಯಾಗಾರ ಉದ್ಘಾಟಿಸಿದ ನಗರ ಸಭಾಧ್ಯಕ್ಷೆ ಎಚ್.ಎಚ್.ಶ್ರೀವಿದ್ಯಾ, ದೇಶದಾದ್ಯಂತ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆ ನೀಡಲು ಕಾನೂನನ್ನು ಬಲಗೊಳಿಸಬೇಕು ಎಂದರು.
3 ನಿಮಿಷಕ್ಕೊಂದು ಅತ್ಯಾಚಾರ
2 ವರ್ಷದ ಮಗುವಿನಿಂದ ಹಿಡಿದು, ಬುದ್ದಿ ಮಾಂದ್ಯರನ್ನೂ ಸೇರಿಸಿಕೊಂಡು ಹಣ್ಣು-ಹಣ್ಣು ಮುದುಕಿಯ ಮೇಲೂ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿರುವುದು ಭಾರತದ ಸಾಂಸ್ಕೃತಿಕ, ರಾಜಕೀಯ-ಆರ್ಥಿಕ ಹಾಗೂ ನೈತಿಕ ಮೌಲ್ಯಗಳ ದುಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಬೀದಿಯಲ್ಲಿ ಮೂರು ನಿಮಿಷಕ್ಕೊಂದು ಮಹಿಳಾ ದೌರ್ಜನ್ಯ ನಡೆಯುತ್ತಿದ್ದರೆ, ಸದನದಲ್ಲಿ ರಾಜಿನಾಮೆ ನೀಡುವ ಕುರಿತು ರಾಜಕಾರಣ ನಡೆಯುತ್ತಿದೆ ಎಂದು ಟೀಕಿಸಿದರು. ಮಹಿಳಾ ದೌರ್ಜನ್ಯ ಮತ್ತು ಅತ್ಯಾಚಾರ ತಡೆಯುವ ನ್ಯಾ. ವರ್ಮ ವರದಿಯನ್ನು ಜಾರಿಗೊಳಿಸುವ ಕುರಿತು ಚರ್ಚೆಯೇ ಆಗಿಲ್ಲ. ಹಾಗಾಗಿ ಅತ್ಯಾಚಾರಿಗಳನ್ನೇ ಹೇರಳವಾಗಿ ತುಂಬಿಕೊಂಡಿರುವ ಬಿಜೆಪಿ, ಕಾಂಗ್ರೆಸ್ ಸರ್ಕಾರಗಳಿಂದ ದೌರ್ಜನ್ಯ ಮುಕ್ತ ಆಡಳಿತ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.