ದೌರ್ಜನ್ಯದ ವಿರುದ್ಧ ಮಹಿಳೆಯರು ಜಾಗೃತರಾಗಬೇಕು: ಆನಂದಕುಮಾರ್
ಬೇಲೂರು: ವಿದ್ಯಾರ್ಥಿ ಜೀವನವೆಂಬುದು ಒಂದು ಸುಂದರವಾದ ಜೀವನವಾಗಿದ್ದು ಇದನ್ನು ಸರಿಯಾದ ರೀತಿಯಲ್ಲಿ ಬೆಳೆಸಿಕೊಂಡು ಉತ್ತಮ ಪ್ರಜೆಯಾಗಿ ನಮ್ಮ ದೇಶಕ್ಕೆ ಆಸ್ತಿಯಾಗಬೇಕು ಎಂದು ಬೇಲೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆನಂದಕುಮಾರ್ ಹೇಳಿದರು. ಪಟ್ಟಣದ ಪಂಪ್ಹೌಸ್ ರಸ್ತೆಯಲ್ಲಿರುವ ಶಾಂತಳ ಮಹಿಳಾ ಕಾಲೇಜಿನಲ್ಲಿ ಇತ್ತೀಚೆಗೆ ಬೇಲೂರು ಪೊಲೀಸ್ ಠಾಣೆ ವತಿಯಿಂದ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ದೌರ್ಜನ್ಯಗಳು ನಡೆಯುತ್ತಿರುವುದರಿಂದ ಮಹಿಳೆಯರು ಜಾಗೃತರಾಗಿರಬೇಕು ಎಂದರು.
ಬಾಲಾಪರಾಧಿಗಳೇ ಹೆಚ್ಚು: ನಂತರ ಮಾತನಾಡಿದ ಶಾಂತಳ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮಂಜೇಗೌಡ, ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳಲ್ಲಿ ಶೇ.80 ರಷ್ಟು ಮಂದಿ 18 ವರ್ಷದ ಒಳಗಿನವರಾಗಿದ್ದಾರೆ. ಹೆಣ್ಣಿಗೆ ಶೋಷಣೆ ದೌರ್ಜನ್ಯ ಪುರಾತನ ಕಾಲದಿಂದಲೂ ನಡೆಯುತ್ತಿದೆ. ಆದರೆ ಅವು ಬೆಳಕಿಗೆ ಬರುತ್ತಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಿಂದಾಗಿ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಎಂದರು. ಕಾರ್ಯಕ್ರಮದಲ್ಲಿ ಎಎಸ್ಐ ಚಂದ್ರಪ್ಪ, ಪಿ.ಸಿ.ನಂದೀಶ್, ಪ್ರಾಂಶುಪಾಲರು, ದಿನೇಶ್, ಅಶೋಕ್, ರಾಕೇಶ್ ಹಾಗೂ ಇತರರು ಇದ್ದರು.