ಯುವ ಜನತೆ ರಾಷ್ಟ್ರಪ್ರೇಮ ಬೆಳೆಸಿಕೊಳ್ಳಲಿ: ಮಂಜುನಾಥಮೂರ್ತಿ
ಹಾಸನ: ಭವ್ಯ ಭಾರತದ ನಿರ್ಮಾಣದಲ್ಲಿ ಯುವ ಜನತೆಯ ನಿಸ್ವಾರ್ಥ, ತ್ಯಾಗ, ಮನೋಭಾವ, ಕರ್ತವ್ಯ ಪ್ರಜ್ಞೆ, ಪ್ರಾಮಾಣಿಕತೆ, ರಾಷ್ಟ್ರ ಪ್ರೇಮದಂತಹ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹಾಸನ ಲಯನ್ ಸಂಸ್ಥೆ ಜಿಲ್ಲಾ ಗೌರ್ನರ್ ಮಂಜುನಾಥಮೂರ್ತಿ ನುಡಿದರು.
ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ಜಿಲ್ಲಾ ಸಂಸ್ಥೆಯಲ್ಲಿ 3 ದಿನಗಳ ಕಾಲ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ತೃತೀಯ ಸೋಪಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಸಮುದಾಯದಲ್ಲಿ ಹೆಚ್ಚುತ್ತಿರುವ ಅಪರಾಧಗಳಿಗೆ ಮಕ್ಕಳು ಮೌಲ್ಯಾಧಾರಿತ ಶಿಕ್ಷಣದಿಂದ ವಂಚಿತರಾಗುತ್ತಿರುವುದೇ ಕಾರಣ ಎಂದು ಹೇಳಿದರು. ನಂದಿನಿ ಮಂಜುನಾಥಮೂರ್ತಿ, ಲಯನ್ ಸಂಸ್ಥೆಯ ಅಧ್ಯಕ್ಷ ಎಂ.ಆರ್.ಪ್ರಕಾಶ್, ಭಾರತ್ ಸ್ಕೌಟ್ಸ್ ಆಯುಕ್ತ ಪ್ರಕಾಶ್ ಎಸ್.ಯಾಜಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಗೈಡ್ಸ್ ಆಯುಕ್ತೆ ಜಯಾ ರಮೇಶ್, ಡಿ.ಟಿ.ಸಿ ಕಾಂಚನಾಮಾಲಾ, ಪಡುವಲಿಪ್ಪೆಯ ಶಿಕ್ಷಕ ಎಂ.ಎಸ್.ಪ್ರಕಾಶ್, ರಾಜ್ಯ ಪ್ರತಿನಿಧಿ ಪದ್ಮಾ ಮುಂತಾದವರಿದ್ದರು. ಕಾಮೇಶ್ವರಿ ನಿರೂಪಿಸಿ, ಜಿಲ್ಲಾ ಕಾರ್ಯದರ್ಶಿ ಮುತ್ತೇಗೌಡ ವಂದಿಸಿದರು.
ಜಿಲ್ಲಾ ಲಯನ್ ಸಂಸ್ಥೆ ವತಿಯಿಂದ 280 ವಿದ್ಯಾರ್ಥಿಗಳಿಗೆ ವಾಚುಗಳು ಹಾಗೂ ಸಂಸ್ಥೆಗೆ ಅಗತ್ಯವಿದ್ದ ಬ್ಯಾಂಡ್ ಸೆಟ್ ವಿತರಿಸಲಾಯಿತು.