ಅತಿಸಾರ ತಡೆಗೆ ಪೌಷ್ಟಿಕ ಆಹಾರ ಅಗತ್ಯ
ಕನ್ನಡಪ್ರಭ ವಾರ್ತೆ, ಹಾಸನ, ಜು 30
ತಾಯಂದಿರು ಉದಾಸೀನ ತಾಳದೆ ಮಕ್ಕಳ ಅತಿಸಾರ ತಡೆಗಟ್ಟುವ ನಿಟ್ಟಿನಲ್ಲಿ ಪೌಷ್ಟಿಕ ಆಹಾರ ಹಾಗೂ ಶುದ್ಧ ಕುಡಿವ ನೀರನ್ನು ಬಳಸಬೇಕು ಎಂದು ಜಿಪಂ ಅಧ್ಯಕ್ಷೆ ಭಾಗ್ಯ ಹೇಳಿದರು.
ನಗರದ ಶ್ರೀಚಾಮರಾಜೇಂದ್ರ ಆಸ್ಪತ್ರೆಯಲ್ಲಿಅತಿಸಾರಕುರಿತು ಬುಧವಾರ ನಡೆದ ಪಾಕ್ಷಿಕ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಕ್ಕಳಲ್ಲಿ ಅತಿಸಾರ ತಡೆಗಟ್ಟುವ ನಿಟ್ಟಿನಲ್ಲಿ ತಾಯಂದಿರು ವೈಯಕ್ತಿಕ ಸ್ವಚ್ಛತೆ, ಶುಚ್ಚಿತ್ವವಾದ ಆಹಾರ ಸೇವನೆ ಮತ್ತು ಶುದ್ಧ ಕುಡಿಯುವ ನೀರು ಬಳಕೆಗೆ ಹೆಚ್ಚಿನ ಗಮನ ಹರಿಸಬೇಕು. ತಾಯಂದಿರು ಮಕ್ಕಳ ಆರೋಗ್ಯದ ಬಗ್ಗೆ ಉದಾಸಿನ ಮಾಡದೆ ಎದೆ ಹಾಲು ಕುಡಿಸಬೇಕೆಂದು ತಿಳಿಸಿದರು.
ಒಆರ್ಎಸ್ ಸೇವಿಸಿ: ಜಿಪಂ ಉಪಾಧ್ಯಕ್ಷ ಲಕ್ಷ್ಮಣಗೌಡ ಮಾತನಾಡಿ, ಅತಿಸಾರ ತಡೆಗಟ್ಟಲು ಮಕ್ಕಳಿಗೆ ನೀಡುವ ಒಆರ್ಎಸ್ ಮತ್ತು ಜಿಂಕ್ನ್ನು ದೊಡ್ಡವರು ಸಹ ಭೇದಿಯಾದ ಸಂದರ್ಭದಲ್ಲಿ ಕಡ್ಡಾಯವಾಗಿ ಸೇವಿಸುವಂತೆ ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ಸಿಂಗ್ ಕಾರ್ಯಕ್ರಮ ಉದ್ಘಾಟಿಸಿ, ಸರ್ಕಾರವು ಮಕ್ಕಳಲ್ಲಿ ಅತಿಸಾರ ತಡೆಗಟ್ಟಿ ಪ್ರಾಣಾಪಾಯದಿಂದ ಪಾರು ಮಾಡುವ ಹಿನ್ನೆಲೆಯಲ್ಲಿ ಸುರಕ್ಷತೆಗಾಗಿ ಒಆರ್ಎಸ್ ಜೊತೆಗೆ ಶಕ್ತಿಗಾಗಿ ಜಿಂಕ್ ಉಚಿತವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಒದಗಿಸುತ್ತಿದೆ ಎಂದರು.
ಕೀಟಾಣು ಕಾರಣ: ಆರ್ಸಿಎಚ್ ಅಧಿಕಾರಿ ಡಾ. ಜನಾರ್ದನ್ ಮಾತನಾಡಿ, ಬಾಯಿಯ ಮೂಲಕ ಶರೀರದೊಳಗೆ ಹೋಗುವ ಕೀಟಾಣುಗಳಿಂದ ವಿಶೇಷವಾಗಿ ಮಲದಲ್ಲಿ ಹುಟ್ಟುವ ಕೀಟಾಣುಗಳಿಂದ ಭೇದಿಯು ಹರಡುತ್ತದೆ. ಸರಿಯಾಗಿ ಸ್ವಚ್ಚತೆಯಿಲ್ಲದೆ ಇರುವ ಕಡೆಗಳಲ್ಲಿ ಭೇದಿ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತದೆ ಎಂದರು.
ಮಕ್ಕಳ ವಿಭಾಗದ ಅಸಿಸ್ಟೆಂಟ್ ಪ್ರೊ. ಡಾ. ಭರತ್ ಕುಮಾರ್ ಮಾತನಾಡಿದರು. ಒಆರ್ಎಸ್ ಮನೆಯಲ್ಲಿಯೇ ತಯಾರಿಸಿಕೊಳ್ಳುವ ಕುರಿತು ಮಾಹಿತಿ ನೀಡಲಾಯಿತು. ಹಿಮ್ಸ್ ನಿರ್ದೇಶಕ ಡಾ. ರಾಚೇಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ಯಾಮಲಾದೇವಿ, ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಮಹೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಶಿವಸ್ವಾಮಿ ಇದ್ದರು. ಪಾರ್ವತಿ ಪ್ರಾರ್ಥಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಬ್ಬಿರ್ ಸ್ವಾಗತಿ, ವಂದಿಸಿದರು.