ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅತ್ಯಾಚಾರಿಗಳ ಮಟ್ಟಹಾಕಲು ಜನರ ಸಹಕಾರ ಅಗತ್ಯ

Rashmi Kasaragodu
Updated On : 30 Jul 2014, 10:48 am

ಕನ್ನಡಪ್ರಭ ವಾರ್ತೆ    ರಾಮನಾಥಪುರ    ಜು.30
ಕಾನೂನುಬಾಹಿರ ಹಾಗೂ ಅಪರಾಧ ಚಟುವಟಿಕೆಗಳನ್ನು ತಡೆಯುವಲ್ಲಿ ನಾಗರೀಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ. ಚನ್ನಣ್ಣನವರ್ ಮನವಿ ಮಾಡಿದರು.
 ಕೊಣನೂರಿನ ಎಂ.ಹೆಚ್.ರಸ್ತೆಯಲ್ಲಿರುವ ಆರ್.ಕೆ.ಕನ್ವೆನ್‌ಷನ್ ಹಾಲ್‌ನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಇತ್ತೀಚೆಗೆ ಏರ್ಪಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಹಾಸನದಲ್ಲಿ ಇತ್ತೀಚೆಗೆ ತೆರೆದ ಮನೆ ಕಾರ್ಯಕ್ರಮದ ಅಡಿಯಲ್ಲಿ ಹೆಣ್ಣು ಮಕ್ಕಳ ರಕ್ಷಣೆಗಾಗಿ ವಿದ್ಯಾರ್ಥಿನಿಯರ ರಕ್ಷಣೆ ಸಂಘವೊಂದನ್ನು ಇತ್ತೀಚೆಗೆ ಉದ್ಘಾಟಿಸಲಾಗಿದೆ ಎಂದರು.
ಆರೋಪಿಗಳ ಸುಳಿವು ನೀಡಿ: ಸಂಘದಲ್ಲಿ ಜಿಲ್ಲಾದ್ಯಂತ ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು, ಎಲ್ಲಾ ಇಲಾಖೆಗಳು, ನಾನಾ ಸಂಘ ಸಂಸ್ಥೆಗಳನ್ನು ಒಟ್ಟಾಗಿ ಸೇರಿಸಿ ಅವರ ಕರ್ತವ್ಯ ಏನು ಅಪರಾಧ ತಡೆಗಟ್ಟುವ ಬಗೆ ಕಾನೂನಿನ ಅರಿವು ಮೂಡಿಸುತ್ತಿರುವುದಾಗಿ ಮತ್ತು ಮಹಿಳೆಯರ ಮೇಲೆ ಅತ್ಯಾಚಾರ ದೌರ್ಜನ್ಯ ಎಸಗುತ್ತಿರುವ ವ್ಯಕ್ತಿಗಳ ಬಗೆ ಸುಳಿವು ನೀಡಿದರೆ ತಡಮಾಡದೆ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
 ಅಪ್ರಾಪ್ತೆಯರು ದೌರ್ಜನ್ಯಕ್ಕೆ ಒಳಗಾಗಿದ್ದಲ್ಲಿ ಅಂತಹವರನ್ನು ನ್ಯಾಯಾಧೀಶರ ಮುಂದೆ ಹೇಳಿಕೆಯನ್ನು ದಾಖಲಿಸಲು ಒಬ್ಬ ಮಹಿಳಾ ಅಧಿಕಾರಿಯನ್ನು ಮುಫ್ತಿಯಲ್ಲಿ ಕಳುಹಿಸಿಕೊಡಲಾಗುವುದು. ಅಪರಾಧ ತಡೆ ಬರಿ ಪೋಲೀಸ್ ಇಲಾಖೆಗೆ ಬಿಟ್ಟದ್ದು ಎಂಬ ಮನೋಭಾವ ದೂರ ಸರಿಸಿ ಸಮಾಜದ ಪ್ರತಿಯೊಬ್ಬ ನಾಗರಿಕರು ಈ ರೀತಿಯ ಅತ್ಯಾಚಾರಿಗಳಿಗೆ ಸರಿಯಾದ ಪಾಠ ಕಲಿಸುವುದರ ಮೂಲಕ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು  ಕೋರಿದರು.
ಪೊಲೀಸರಿಗೂ ಎಚ್ಚರಿಕೆ: ವಸೂಲಿ ದಂಧೆಗಿಳಿಯುವ ಯಾವ ವ್ಯಕ್ತಿಯಾಗಿರಲಿ ಅವನು ನಮ್ಮ ಪೊಲೀಸ್ ಇಲಾಖೆಯಲ್ಲಿ ಯಾವುದೇ ಹುದ್ದೆಯಲ್ಲಿರಲಿ ಲೆಕ್ಕಿಸದೆ ಮನೆಗೆ ಕಳುಹಿಸಲಾಗುವುದು. ಖಾಕಿ ಹಾಕಿಕೊಂಡು ಸುಲಿಗೆ ಮಾಡುವ ಈ ರೀತಿ ಡಕಾಯಿತರಿಂದ ಇಲಾಖೆಗೇ ಅಪಮಾನ. ಇದನ್ನು ಕೇಳಿ ಸಹಿಸಲೂ ಸಾಧ್ಯವಿಲ್ಲ. ಆ ರೀತಿ ಯಾರಾದರು ಕರ್ತವ್ಯ ಲೋಪವೆಸಗುತ್ತಿದ್ದರೆ ನೇರವಾಗಿ ನನ್ನ ಮೊ.9480804787 ಸಂಪರ್ಕಿಸಬಹುದು ನಿಮ್ಮ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದರು.
 ಮರಳು ದಂಧೆ ತಡೆಯುವ ಹಕ್ಕು ಇಲಾಖೆಗೆ ಇಲ್ಲವೆನ್ನುವುದಾದರೆ ಸಮಾಜದ ಅಪರಾಧ ಮತ್ತು ಅಕ್ರಮ ಚಟುವಟಿಕೆಯನ್ನು ತಡೆಗಟ್ಟಲು ನಮ್ಮ ನೇಮಕ ಹಾಗೂ ನೀಡುತ್ತಿರುವ ಸಂಬಳಕ್ಕೆ ಅರ್ಥವಿಲ್ಲವೆನಿಸುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಧೂಮಪಾನ ನಿಷೇಧ: ಬೀದಿಯಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದು ಹಾಗೂ ದಂಡ ವಿಧಿಸಲಾಗುವುದು.  ನಮ್ಮ ದುಶ್ಚಟಗಳಿಂದ ಬೇರೆಯವರಿಗೆ ತೊಂದರೆಯಾಗಬಾರದು ಚಿಕ್ಕದಾಗಿ ಶುರುವಾಗುವ ದುರಭ್ಯಾಸ ಕೊನೆಗೆ ಸಮಾಜ ಕಂಟಕರನ್ನಾಗಿಸಬಹುದು ಎಂದರು
 ಬಸವಾಪಟ್ಟಣಕ್ಕೆ ಇನ್ನೆರಡು ದಿವಸದಲ್ಲಿ ಹೊರ ಪೊಲೀಸ್ ಠಾಣೆ ಆರಂಭಿಸುವುದಾಗಿಯೂ ಮತ್ತು ಅಕ್ರಮ ಮಧ್ಯ ಮಾರಾಟ ಮಾಡುವವರು ಹಾಗೂ ಇವರಿಗೆ ಪ್ರೇರಕರಾಗಿ ಮಧ್ಯ ಒದಗಿಸುವ ವೈನ್ ಶಾಪ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹಾಗೂ ಕೊಣನೂರು ಮತ್ತು ರಾಮನಾಥಪುರದಲ್ಲಿ ಸಂಚಾರಿ ಅವ್ಯವಸ್ಥೆ ತಡೆಗಟ್ಟಲು ವಾಹನ ಸಂಚಾರಿ ನಿಯಮ ಅಳವಡಿಸುವುದಾಗಿ ತಿಳಿಸಿದರು.
ಸಾರ್ವಜನಿಕರ ಅಹವಾಲು: ಹೊಳೆನರಸೀಪುರದ ಎಎಸ್‌ಪಿ ವಿನಾಯಕ್ ಪಾಟೀಲ್, ಅರಕಲಗೂಡಿನ ಸಿಪಿಐ ರಾಜು ಇದ್ದರು. ಆಪಲ್ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜನರಿಂದ ಅಹವಾಲನ್ನು ಎಸ್ಪಿ ಆಲಿಸಿದರು. ಕೊಣನೂರಿನ ಪಿಎಸ್‌ಐ ಸವಿ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement