ಕಿರುಕುಳ ಆರೋಪ: ರಕ್ಷಣೆಗೆ ಮನವಿ
ಮಂಡ್ಯ: ತಾಲೂಕಿನ ಮಾರಗೌಡನಹಳ್ಳಿ ಗ್ರಾಮದ ಕೆಲ ಕಿಡಿಗೇಡಿಗಳು ಗ್ರಾಮದಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಅವಾಚ್ಯ ಶಬ್ದದಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮದ ವ್ಯವಸಾಯ ಕಾಲೋನಿ ಆದಿಕರ್ನಾಟಕ ಜನಾಂಗದ ಮುಖಂಡರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಗ್ರಾಮದಿಂದ ವಾಹನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ತಮಗೆ ಸೂಕ್ತ ರಕ್ಷಣೆ ಒದಗಿಸುವಂತೆ ಕೋರಿದರು.
ಗ್ರಾಮದಲ್ಲಿ ಅಕ್ರಮ ಗುಡಿಸಲನ್ನು ನಿರ್ಮಿಸಿಕೊಂಡಿರುವ ಶ್ರೀನಿವಾಸ, ಆತನ ಪತ್ನಿ ಲಕ್ಷ್ಮಮ್ಮ, ಶ್ರೀನಿವಾಸನ ಸಹೋದರಿ, ಚಂದ್ರಮ್ಮ, ಈಕೆಯ ಮಗ ಪ್ರದೀಪ ಗ್ರಾಮದಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಅಶ್ಲೀಲ ಪದಗಳಿಂದ ನಿಂದಿಸುವುದು, ಸಣ್ಣ ಘಟನೆಯನ್ನೇ ದೊಡ್ಡದಾಗಿ ಬಿಂಬಿಸಿ ಜಗಳ ತೆಗೆದು ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಈ ಬಗ್ಗೆ ಕೇಳಲು ಹೋದರೆ ಅತ್ಯಾಚಾರ ನಡೆಸಲು ಬಂದಿದ್ದಾರೆ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿ ಕೊಲೆ ಕೇಸ್ ಮಾಡಿಸಿ ಜೈಲಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಒಡ್ಡುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.
ಗ್ರಾಮದ ತಮ್ಮಯ್ಯನ ಪುತ್ರ ಚನ್ನಕೇಶವ ಎಂಬಾತನ ಮೇಲೆ ಸುಳ್ಳು ದೂರು ದಾಖಲಿಸಿ ಆತನನ್ನು ಜೈಲಿಗೆ ಕಳುಹಿಸುವಂತೆ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಾಜ್ಯಾದ್ಯಂತ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ನಮ್ಮ ಪಾಡಿಗೆ ನಾವು ಬದುಕು ಸಾಗಿಸುತ್ತಿದ್ದರೂ ಕೆಲವರು ಕಿರುಕುಳ ನೀಡುತ್ತಾ, ತಮ್ಮ ಮೇಲೆ ಇಂತಹ ಅನಗತ್ಯ ದೂರು ನೀಡಿ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಂ. ಮಹದೇವು, ಚನ್ನಸ್ವಾಮಿ, ಸೌಮ್ಯ, ಪದ್ಮ, ನಾಗರಾಜು, ಗೀತಾ, ಲಿಂಗಮ್ಮ, ನಾಗಮ್ಮ, ಪುಟ್ಟಲಿಂಗಮ್ಮ, ರಮೇಶ, ರಾಜಕುಮಾರ್, ಆನಂದ, ವೀಣಾ, ಲಕ್ಷ್ಮಮ್ಮ, ಶಿವರತ್ನಮ್ಮ, ಶಿವಣ್ಣ, ಚಲುವಪ್ಪಾಜಿ, ಚಂದ್ರಶೇಖರ, ಪಾಪಣ್ಣ, ಗೋಪಾಲ, ಮಂಜುಳಾ, ನಾಗರಾಜು, ಮಲ್ಲೇಶ ಭಾಗವಹಿಸಿದ್ದರು.